ಬೆಂಗಳೂರು: ”ಸುಧಾಮೂರ್ತಿ ಅವರು ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರುವುದನ್ನು ನೋಡಿದರೆ ಹಿಂದುಳಿದ ವರ್ಗಗಳ ಬಗ್ಗೆ ಅವರ ಕಾಳಜಿ ಗೊತ್ತಾಗುತ್ತದೆ” ಎಂದು ಸಚಿವ ಶಿವರಾಜ್ ತಂಗಡಗಿ ಅಸಮಾಧಾನ ಹೊರಹಾಕಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ, ”ಸುಧಾಮೂರ್ತಿ, ತೇಜಸ್ವಿ ಸೂರ್ಯ ಹೇಳುವುದು ನೋಡಿದರೆ, ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಎಷ್ಟು ಕಾಳಜಿ ಎಂಬುದು ಗೊತ್ತಾಗುತ್ತಿದೆ. ಸುಧಾಮೂರ್ತಿಯವರ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ, ಅವರ ಮನಸ್ಥಿತಿ ನೋಡಿದರೆ ನನಗೆ ಬಹಳ ಬೇಸರ ಆಗುತ್ತದೆ. ನೀವು ಹಿಂದುಳಿದಿಲ್ಲ ಸರಿ. ಆದರೆ ಮಾಹಿತಿಯನ್ನು ಕೊಡಿ. ನಿಮ್ಮ ವೈಯಕ್ತಿಕ ವಿಚಾರ ಕೇಳುತ್ತಿಲ್ಲ. ಕೊಡಲೇಬೇಕು ಅಂತ ನಾವು ಕೇಳಲ್ಲ” ಎಂದರು.
”ಇವರು ಒಂದು ಸ್ಥಾನಮಾನ ಇರುವವರು. ರಾಜ್ಯಸಭೆ, ಲೋಕಸಭೆ ಸದಸ್ಯರಾಗಿ ಅವರ ಮನಸ್ಥಿತಿಯು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತದೆ. ಆಗಲೂ ಇವರು ಹಾಗೆಯೇ ಹೇಳುತ್ತಾರಾ?. ಅವರು ಒಂದು ನಿರ್ದಿಷ್ಟ ಮಾಹಿತಿ ಕೊಟ್ಟಂತೆ ಕಾಣುತ್ತಿದೆ. ನಾವು ಅವರ ವೈಯುಕ್ತಿಕ ವಿವರ ಕೇಳುತ್ತಿಲ್ಲ. ಅವರ ಬಂಗಾರ, ಬೆಳ್ಳಿ ಬಗ್ಗೆ ಕೇಳುತ್ತಿಲ್ಲ. ತುಳಿತಕ್ಕೊಳಗಾದವರಿಗೆ ಮನೆ ಇಲ್ಲ. ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದಾರೆ. ಅವರ ಮಾಹಿತಿ ಗೊತ್ತಾದರೆ, ಸೌಲಭ್ಯ ನೀಡಬಹುದು. ಅದಕ್ಕೆ ನಾವು ಸಮೀಕ್ಷೆ ಮಾಡುತ್ತಿರುವುದು” ಎಂದು ತಿಳಿಸಿದರು.
ಕೇಂದ್ರದ ಗಣತಿಗೆ ಏನು ಹೇಳುತ್ತಾರೆ?: ಸಚಿವ ಸಂತೋಷ್ ಲಾಡ್ ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ”ಸುಧಾಮೂರ್ತಿ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ಸುಧಾಮೂರ್ತಿ ಭಾಗವಹಿಸಲ್ಲ ಅಂದರೆ ಗೌರವಿಸುತ್ತೇನೆ. ಅವರು ಸಾಹುಕಾರರಾಗಿದ್ದಾರೆ. ಈಗಾಗಲೇ 90% ಸರ್ವೆ ಆಗಿದೆ. ಅವರ ಬಗ್ಗೆ ನಮಗೆ ಬಹಳ ಗೌರವ ಇದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 10% ಮೀಸಲಾತಿ ಕೊಟ್ಟರು. ಆಗ ಸುಧಾಮೂರ್ತಿಯವರು ಯಾಕೆ ಮಾತನಾಡಲಿಲ್ಲ?. ಕೇಂದ್ರದ ಗಣತಿಗೆ ಏನು ಹೇಳುತ್ತಾರೆ” ಎಂದು ಅಸಮಾಧಾನ ಹೊರಹಾಕಿದರು.
ಸುಧಾಮೂರ್ತಿ ಮಾಡಿದ್ದು ತಪ್ಪು: ಇದೇ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ”ಸುಧಾಮೂರ್ತಿ ಅವರು ಮಾಡಿದ್ದು ತಪ್ಪು. ಅವರು ಪಾಲ್ಗೊಂಡಿದ್ದರೆ ಚೆನ್ನಾಗಿತ್ತು. ಅವರು ಹಿಂಬರಹ ಹಾಗೆ ಕೊಟ್ಟಿರುವುದು ತಪ್ಪು. ಎಲ್ಲರೂ ಸುಧಾಮೂರ್ತಿಯವರನ್ನು ಪ್ರೇರಣೆ ರೀತಿಯಲ್ಲಿ ನೋಡುತ್ತಾರೆ. ಮುಂದೆ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತದೆ. ಆವಾಗಲೂ ಈ ರೀತಿ ಹಿಂಬರಹ ಕೊಡುತ್ತಾರಾ?. ನೀವು ಅದನ್ನು ಹೇಳುವ ರೀತಿಯಲ್ಲಿ ಹೇಳಬೇಕು” ಎಂದು ಆಕ್ಷೇಪಿಸಿದರು.
Laxmi News 24×7