ಬೆಳಗಾವಿ : ಅದೊಂದು ಕಾಲ ಇತ್ತು, ಜಿಲ್ಲೆಯ ಪ್ರಭಾವಿ ನಾಯಕರ ಶಿಷ್ಯರು, ಆಪ್ತರು, ದ್ವಿತೀಯ ಸಾಲಿನ ನಾಯಕರು ಮತ್ತು ಕಾರ್ಯಕರ್ತರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಆಗುತ್ತಿದ್ದರು. ಆದರೆ, ಸದ್ಯ ಹಾಲಿ – ಮಾಜಿ ಶಾಸಕರ ದಂಡೇ ಅಧಿಕಾರಕ್ಕಾಗಿ ದುಂಬಾಲು ಬಿದ್ದಿದೆ. ಅದರಲ್ಲೂ ಪ್ರಭಾವಿ ಕುಟುಂಬಗಳೂ ಪೈಪೋಟಿಗೆ ಬಿದ್ದಿದ್ದು, ವಿಸ್ತೃತ ವರದಿ ಇಲ್ಲಿದೆ.
ಮಾಜಿ ಇದ್ದವರು ಹಾಲಿ ಆಗಲು ಇದು ಸಹಕಾರಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಜಿಲ್ಲಾ ರಾಜಕಾರಣದ ಕೇಂದ್ರಬಿಂದುವಾಗಿದೆ. ಜಿಲ್ಲೆಯ ಘಟಾನುಘಟಿ ನಾಯಕರಿಗೆ ರಾಜಕೀಯ ನೆಲೆ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಕೂಡ ಈ ಬ್ಯಾಂಕಿಗೆ ಇದೆ. ಅಲ್ಲದೇ ರಾಜ್ಯದಲ್ಲಿಯೇ ನಂ.1 ಸ್ಥಾನ ಹೊಂದಿದೆ. ಇದರಲ್ಲಿ ಹಿಡಿತ ಸಾಧಿಸಿದರೆ ಇಡೀ ಜಿಲ್ಲೆಯಲ್ಲಿ ಪ್ರಭಾವ ಹೊಂದಬಹುದು. ನಿರ್ದೇಶಕರಾಗಿ ಆಯ್ಕೆ ಆದವರು ಮುಂದೆ ಶಾಸಕರಾಗಬಹುದು. ಮಾಜಿಗಳು ಮತ್ತೆ ಮುಂದೆ ಎಂಎಲ್ಎಗಳಾಗಿ ಆಗಿ ಆಯ್ಕೆ ಆಗಬಹುದು ಎಂಬ ಲೆಕ್ಕಾಚಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳದ್ದು ಮತ್ತು ಅವಿರೋಧವಾಗಿ ಆಯ್ಕೆ ಆದವರದ್ದು.
ಮಂತ್ರಿಗಳು, ಡಿಸಿಎಂ ಆದವರಿಂದಲೂ ಪ್ರಯತ್ನ: ಜಿಲ್ಲೆಯಲ್ಲಿ ಅನೇಕ ರಾಜಕಾರಣಿಗಳು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರ ರಂಗದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದವರೇ ಹೆಚ್ಚು. ಬಳಿಕ ಶಾಸಕ, ಎಂಪಿ, ಮಂತ್ರಿ, ಡಿಸಿಎಂ ಆದವರು ಅನೇಕರು. ಅಂತಹ ತಾಕತ್ತು ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಇರುವುದು ವಿಶೇಷ.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೇಲೆಯೇ ಲಕ್ಷ್ಮಣ ಸವದಿ ಶಾಸಕ, ಮಂತ್ರಿ ಮತ್ತು ಡಿಸಿಎಂ ಆಗಿದ್ದರು. ಅದೇ ರೀತಿ ಸತೀಶ್ ಜಾರಕಿಹೊಳಿ ಶಾಸಕ ಮತ್ತು ಮಂತ್ರಿ ಸ್ಥಾನ ಪಡೆದಿದ್ದಾರೆ. ಇನ್ನು ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸಂಸದರಾಗಿದ್ದರು. ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಗಣೇಶ ಹುಕ್ಕೇರಿ ಸೇರಿ ಮೊದಲಾದವರು ಶಾಸಕರಾಗಿದ್ದರು. ಹಾಗಾಗಿ, ಡಿಸಿಸಿ ನಿರ್ದೇಶಕ ಸ್ಥಾನ ಮುಂದಿನ ಎಲ್ಲ ವಿಧದ ಚುನಾವಣೆಗಳಿಗೆ ಒಂದು ಪೀಠಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.

3 ಹಾಲಿ ಶಾಸಕರು, ಇಬ್ಬರು ಮಾಜಿ ಎಂಎಲ್ಎಗಳು ಅವಿರೋಧವಾಗಿ ಆಯ್ಕೆ: ಈಗಾಗಲೇ ಮೂವರು ಹಾಲಿ ಶಾಸಕರು, ಓರ್ವ ಹಾಲಿ ಎಂಎಲ್ಸಿ ಹಾಗೂ ಓರ್ವ ಮಾಜಿ ಶಾಸಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಕಣದಲ್ಲಿ ಓರ್ವ ಹಾಲಿ ಶಾಸಕ, ಇಬ್ಬರು ಮಾಜಿ ಸಂಸದರು, ಮೂವರು ಮಾಜಿ ಶಾಸಕರು ಇದ್ದಾರೆ.

ಕಣದಲ್ಲಿರುವ ಹಾಲಿ, ಮಾಜಿಗಳು ಯಾರ್ಯಾರು? : ಕಳೆದ 20 ವರ್ಷಗಳಲ್ಲಿ ಶಾಸಕರು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವುದು ಹೆಚ್ಚಾಗುತ್ತಿದೆ. ಈ ಬಾರಿಯ ಕಣದಲ್ಲಿ ಅಥಣಿ ತಾಲೂಕಿನಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ ಸ್ಪರ್ಧಿಸಿದ್ದಾರೆ. ಇನ್ನು ಹುಕ್ಕೇರಿಯಿಂದ ಮಾಜಿ ಸಂಸದ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ, ನಿಪ್ಪಾಣಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಪರಾಜಿತ ಎಂಎಲ್ಎ ಅಭ್ಯರ್ಥಿ ಉತ್ತಮ ಪಾಟೀಲ, ಬೈಲಹೊಂಗಲದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಕಿತ್ತೂರಿನಿಂದ ಮಾಜಿ ಸಚಿವ ದಿ.ಡಿ.ಬಿ. ಇನಾಮದಾರ್ ಪುತ್ರ ವಿಕ್ರಮ್ ಇನಾಮದಾರ್ ವಿರುದ್ಧ ಹಾಲಿ ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ ನಾನಾಸಾಹೇಬ ಪಾಟೀಲ ಕಣದಲ್ಲಿದ್ದಾರೆ. ಇನ್ನು ರಾಮದುರ್ಗದಲ್ಲಿ ಹಾಲಿ ನಿರ್ದೇಶಕ ಎಸ್. ಎಸ್. ಢವಣ ವಿರುದ್ಧ ಮಾಜಿ ಶಾಸಕ ಮಹಾದೇವಪ್ಪ ಪಟ್ಟಣ ಸಹೋದರ ಮಲ್ಲಣ್ಣ ಯಾದವಾಡ ಸ್ಪರ್ಧಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು : ಇದೇ ಮೊದಲ ಬಾರಿ ಡಿಸಿಸಿ ಬ್ಯಾಂಕಿಗೆ ಸ್ಪರ್ಧಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ಗೋಕಾಕಿನಿಂದ ಶಾಸಕ ರಮೇಶ ಜಾರಕಿಹೊಳಿ ಪುತ್ರ ಅಮರನಾಥ್ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಇತರ ಕ್ಷೇತ್ರದಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಚಿಕ್ಕೋಡಿಯಿಂದ ಹಿರಿಯ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಪುತ್ರ ಶಾಸಕ ಗಣೇಶ ಹುಕ್ಕೇರಿ, ಯರಗಟ್ಟಿ ತಾಲೂಕಿನಿಂದ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಸವದತ್ತಿಯಿಂದ ಮಾಜಿ ಶಾಸಕ ರಾಜಣ್ಣ ಮಾಮನಿ ಸಹೋದರ ರಾಜಣ್ಣ ಮಾಮನಿ, ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.

Laxmi News 24×7