ಬೆಂಗಳೂರು: ಆನ್ಲೈನ್ ಮತ್ತು ಆಫ್ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಶಾಸಕರ ಪತ್ನಿ ಡಿ.ಆರ್.ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ.
ಕೆ.ಸಿ.ವೀರೇಂದ್ರ ಅವರನ್ನು ಪಿಎಂಎಲ್ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಬಂಧಿಸಿರುವ ಕ್ರಮ ಕಾನೂನುಬಾಹಿರ ಎಂದು ಘೋಷಿಸುವಂತೆ ಪತ್ನಿ ಚೈತ್ರಾ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಅದರ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಜಾರಿ ನಿರ್ದೇಶನಾಲಯದ ಪರ ವಕೀಲರ ವಾದ ಮಂಡನೆ: ವಿಚಾರಣೆ ವೇಳೆ, ಶಾಸಕ ವೀರೇಂದ್ರ ಅವರನ್ನು ಬಂಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್, ಅರವಿಂದ ಕಾಮತ್, ”ಅರ್ಜಿದಾರರ ಪತಿಯ ವಿರುದ್ಧ 30 ಸಾವಿರ ರೂ.ಗಳನ್ನು ವಂಚನೆ ಮಾಡಿರುವ ಆರೋಪ ಸಂಬಂಧ ಸತೀಶ್ ಎಂಬವರು ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಮಾತ್ರ ತನಿಖೆ ನಡೆಯುತ್ತಿಲ್ಲ. ಆ ಆರೋಪಕ್ಕೆ ಸಂಬಂಧಿಸಿದಂತೆ ಸುತ್ತಲಿನ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ನಡೆಯಲಿದೆ” ಎಂದರು.
”ಅಲ್ಲದೇ, ಆನ್ಲೈನ್ ಹಣ ವರ್ಗಾವಣೆ (ಫೋನ್ ಪೇ) ಮಾಡಿರುವ ಸಂಬಂಧವೂ ತನಿಖೆ ನಡೆಸಬೇಕಾಗಿದೆ. ಬೇರೆ ಬೇರೆ ಕಂಪನಿಗಳ ಮೂಲಕ ಅರ್ಜಿದಾರರ ಪತಿ ವ್ಯವಹಾರ ನಡೆಸುತ್ತಿದ್ದಾರೆ. ಗೇಮಿಂಗ್ ಕಂಪನಿಗಳ ಮೂಲಕ ಗ್ರಾಹಕರನ್ನು ವಂಚನೆ ಮಾಡಿದ್ದಾರೆ. ಕೆವೈಸಿ ನೀಡದೆಯೂ ಹಣ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮ ಬೆಟ್ಟಿಂಗ್ ಮಾಡಿ, ಸಂಗ್ರಹಿಸಿದ ಹಣವನ್ನು ಶ್ರೀಲಂಕಾ ದುಬೈ ಸೇರಿದಂತೆ ವಿದೇಶಗಳಲ್ಲಿ ಕೆಸಿನೋಗಾಗಿ ಹೂಡಿಕೆ ಮಾಡಲಾಗಿದೆ. ಅರ್ಜಿದಾರರ ಪತಿಯ ವಿರುದ್ಧದ ಎಲ್ಲ ಆರೋಪಗಳನ್ನು ಕ್ರೋಢೀಕರಿಸಿ ತನಿಖೆ ನಡೆಸಲಿದೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು” ಎಂದು ಮನವಿ ಮಾಡಿದರು.
Laxmi News 24×7