ಹಾವೇರಿ: ಸುಮಾರು 13,600 ಹಾವುಗಳನ್ನು ಹಿಡಿದಿರುವ ಉರಗರಕ್ಷಕ ರಮೇಶ್ ಹಾನಗಲ್ ಅವರು ಇದೇ ಮೊದಲ ಬಾರಿಗೆ ಎರಡು ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಜಿಲ್ಲೆಯ ಕ್ಯಾಸನೂರು ಗ್ರಾಮದ ಎಸ್.ಜಿ.ಪಾಟೀಲ ಎಂಬವರ ಅಡಿಕೆ ಹಾಗೂ ಬಾಳೆ ತೋಟಗಳಲ್ಲಿ ಗುರುವಾರ ಎರಡು ಹೆಬ್ಬಾವುಗಳು ಕಾಣಿಸಿಕೊಂಡಿದ್ದವು.
ಹಾವೇರಿಯ ಉರಗರಕ್ಷಕ ರಮೇಶ್ ಅವರಿಗೆ ಹಾನಗಲ್ ತಾಲೂಕಿನ ಚಿಕ್ಕೌಂಶಿ ಹೊಸೂರು ಗ್ರಾಮದಿಂದ ಎಂದಿನಂತೆ ಹಾವು ಬಂದಿವೆ ಎಂಬ ಕರೆ ಬಂತು. ಎಂದಿನಂತೆ ಹಾವು ಹಿಡಿಯಲು ಹೋಗಿದ್ದ ರಮೇಶ್ ಅವರಿಗೆ ಆಶ್ಚರ್ಯ ಕಾದಿತ್ತು. ಸುಮಾರು 15 ಅಡಿ ಉದ್ದದ ಹಾಗೂ 10 ಅಡಿ ಉದ್ದದ ಹೆಬ್ಬಾವು ಅಲ್ಲಿದ್ದವು. ಇದುವರೆಗೂ ನಾಗರಹಾವು, ಕೊಳಕುಮಂಡಲ, ವೈಪರ್ ನೀರುಹಾವು ಸೇರಿದಂತೆ ಹಲವು ಹಾವುಗಳನ್ನು ಹಿಡಿದಿದ್ದ ರಮೇಶ್, ಇದೀಗ ಮೊದಲ ಬಾರಿಗೆ ಎರಡು ಹೆಬ್ಬಾವುಗಳನ್ನು ಹಿಡಿದು, ಸುರಕ್ಷಿತವಾಗಿ ಅರಣ್ಯದಲ್ಲಿ ಬಿಟ್ಟುಬಂದಿದ್ದಾರೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಹೆಬ್ಬಾವುಗಳು ಕಾಣಿಸಿಕೊಂಡಿದ್ದವು. 15 ಅಡಿ ಉದ್ದದ ಹಾವು 24 ಕೆಜಿ ಭಾರವಿದ್ದು, 10 ಅಡಿ ಉದ್ದದ ಹಾವು ಸುಮಾರು 15 ಕೆಜಿ ಭಾರವಿತ್ತು. ಹತ್ತಿರದ ಅರಣ್ಯ ಪ್ರದೇಶದಿಂದ ಹೆಬ್ಬಾವುಗಳು ತೋಟಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ರಮೇಶ್ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸಾಥ್: ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ರಮೇಶ್ ಅವರು ಎರಡು ಹೆಬ್ಬಾವುಗಳನ್ನು ಹಿಡಿದಿದ್ದಾರೆ. ಅರಣ್ಯಾಧಿಕಾರಿ ಸಿದ್ದಮ್ಮ ಕರಿಗಾರ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ ವೈ ಚಲವಾದಿ, ಚಾಲಕ ಮರ್ದಾನ ಅಲಿ, ಸಿಬ್ಬಂದಿ ಮಂಜುನಾಥ ಸೇರಿಕೊಂಡು ಹಾವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಹೆಬ್ಬಾವು ಹಿಡಿದಿರುವುದು ಇದೇ ಮೊದಲು: ಹಾವೇರಿ ನಗರದಲ್ಲಿ ಸ್ನೇಕ್ ರಮೇಶ್ ಎಂದು ಪ್ರಸಿದ್ದಿಯಾಗಿರುವ ರಮೇಶ್ ಇದುವರೆಗೂ 13,600 ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ. ಆದರೆ ಹೆಬ್ಬಾವುಗಳನ್ನು ಹಿಡಿದಿರುವುದು ಇದೇ ಮೊದಲ ಬಾರಿಗೆ. ಹೆಬ್ಬಾವು ಹಿಡಿಯಲು ಹೋದಾಗ ಭಯದ ಜೊತೆಗೆ ಉತ್ಸುಕತೆ ಇತ್ತು. ಹಾವುಗಳನ್ನು ರಕ್ಷಣೆ ಮಾಡಿದ ನಂತರ ಖುಷಿಯಾಯಿತು. ನನಗೆ ಕಾಳಿಂಗ ಸರ್ಪ ಹಿಡಿಯುವ ಆಸೆ ಇದೆ. ಅದು ಯಾವಾಗ ಈಡೇರುತ್ತದೆ ಕಾದು ನೋಡಬೇಕು ಎನ್ನುತ್ತಾರೆ ಉರಗಪ್ರೇಮಿ ರಮೇಶ್.
ಮೈಸೂರಿನ ಸ್ನೇಕ್ ಶ್ಯಾಮ್ ಅವರಿಂದ ತರಬೇತಿ: ಹಾವೇರಿಯಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೂ ಮೊದಲ ಕರೆ ರಮೇಶ್ ಅವರಿಗೆ ಬರುತ್ತದೆ. ರಮೇಶ್ ಕಳೆದ ಹಲವು ವರ್ಷಗಳಿಂದ ಹಾವುಗಳನ್ನು ರಕ್ಷಿಸುತ್ತಿದ್ದಾರೆ. ಹಾವುಗಳನ್ನು ಹಿಡಿಯುವ ಬಗ್ಗೆ ಅವರು ಮೈಸೂರಿನ ಉರಗರಕ್ಷಕ ಸ್ನೇಕ್ ಶ್ಯಾಮ್ ಅವರಿಂದ ತರಬೇತಿ ಪಡೆದಿರುವ ರಮೇಶ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಾವುಗಳ ರಕ್ಷಣೆ ಜೊತೆಗೆ ಹಾವುಗಳು ಪರಿಸರ ಸಮತೋಲನದಲ್ಲಿ ಯಾವ ರೀತಿ ಪಾತ್ರವಹಿಸುತ್ತವೆ ಎನ್ನುವ ಕುರಿತಂತೆ ವಿದ್ಯಾರ್ಥಿಗಳಿಗೆ ರಮೇಶ್ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಅಲ್ಲದೆ ಹಾವು ಹಿಡಿಯುವ ವಿದ್ಯೆಯನ್ನು ತಮ್ಮ ಸಹೋದರ ಶ್ರೀಕಾಂತ್ ಅವರಿಗೂ ಇವರು ಕಲಿಸಿದ್ದಾರೆ. ಒಂದು ವೇಳೆ ರಮೇಶ್ ಬೇರೆ ಊರಿಗೆ ಹೋಗಿದ್ದರೆ ಸಹೋದರ ಶ್ರೀಕಾಂತ್ ಹಾವು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ.
Laxmi News 24×7