ಬೆಳಗಾವಿ: ”ಎನ್ಡಿಆರ್ಎಫ್ ಅನುದಾನವನ್ನು ನಾವು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿಲ್ಲ. ಬಿಜೆಪಿಯವರಿಗೆ ಕಾಮಾಲೆ ರೋಗ ಅಂಟಿಕೊಂಡಿದೆ. ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿ ಆಗಿದ್ದರಿಂದ ಬಿಜೆಪಿಯವರಿಗೆ ತಳಮಳ ಶುರುವಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಉತ್ತರಿಸಿದ್ದಾರೆ. ”ಹರಿಯಾಣ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಕರಣೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ತರಲು ಆಗುವುದಿಲ್ಲ ಎಂದಿದ್ದರು. ಆದರೆ, ನಾವು ಅನುಷ್ಠಾನಕ್ಕೆ ತಂದಿದ್ದೇವೆ. ಹಾಗಾಗಿ, ನಾವು ಏನು ಹೇಳಿದ್ದೇವೆಯೋ ಅದನ್ನು ಮಾಡಿಯೇ ತೀರುತ್ತೇವೆ” ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.
ಬಿಜೆಪಿಯವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ: ಪದೇ ಪದೆ ನಾನೇ ಸಿಎಂ ಎನ್ನುವ ಮೂಲಕ ಸಿದ್ದರಾಮಯ್ಯ ಹೈಕಮಾಂಡ್ಗೆ ಸೆಡ್ಡು ಹೊಡೆದಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ”ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಅವರು ಯಾರು? ಅವರೇನು ನಮ್ಮ ಹೈಕಮಾಂಡಾ? ಅವರ ಕೆಲಸ ಅವರು ಮಾಡಬೇಕು. ಬಿಜೆಪಿಯವರ ಇಂತಹ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದರು.
ಖಾಸಗಿಯವರಿಗೆ ಆಸ್ಪತ್ರೆ ಕೊಟ್ಟಿಲ್ಲ ಎಂದ ಸಚಿವರು: ಇದೇ ವೇಳೆ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಹಣೆ ಖಾಸಗಿಯವರಿಗೆ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ, ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ”ಖಾಸಗಿಯವರಿಗೆ ಕೊಟ್ಟಿಲ್ಲ. ಕೆಎಲ್ಇ ಸಂಸ್ಥೆಯ ವೈದ್ಯರು ಉಚಿತವಾಗಿ ಸೇವೆ ನೀಡಲಿದ್ದಾರೆ. ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದೆವು. ಈ ವೇಳೆ, 11 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನುಳಿದ ಖಾಲಿ ಇರುವ ಹುದ್ದೆಗಳು ತುಂಬುವವರೆಗೆ ಕೆಎಲ್ಒ ಅವರು ತಾತ್ಕಾಲಿಕವಾಗಿ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಎಲ್ಲ ರೀತಿಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ” ಎಂದು ಸಮರ್ಥಿಸಿಕೊಂಡರು.
ಆರ್.ಅಶೋಕ್ ಆರೋಪವೇನು?: ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾದ್ಯಂತ ಶುಕ್ರವಾರ ಬಿಜೆಪಿ ನಿಯೋಗದಿಂದ ಬೆಳೆ ಹಾನಿ ಪ್ರದೇಶ ವೀಕ್ಷಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್, ”ಸರ್ಕಾರ ಸಂಪೂರ್ಣ ದಿವಾಳಿ ಆಗಿದೆ. ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಎನ್ಡಿಆರ್ಎಫ್ ಹಣ ಬರುತ್ತದೆ. ಆದರೆ, ಸರ್ಕಾರ ಇದೇ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುತ್ತಿದೆ. ಮರ್ಯಾದೆ ಇದ್ದರೆ ಹಣ ಬಳಸಿಕೊಳ್ಳಲ್ಲ. ಆದರೆ ಇವರಿಗೆ ಮರ್ಯಾದೆ ಇಲ್ಲ” ಎಂದು ಆರೋಪ ಮಾಡಿದ್ದರು.
Laxmi News 24×7