ಬಳ್ಳಾರಿ/ಆಂಧ್ರ ಪ್ರದೇಶ: ಹಬ್ಬ ಒಂದೇ ಆದರೂ ಅವುಗಳ ಆಚರಣೆಯ ವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ. ಮೈಸೂರಿನಲ್ಲಿ ವಿಜಯದಶಮಿಯನ್ನು ಅಂಬಾರಿ ಮೇಲೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನಿಟ್ಟು ವಿಜೃಂಭಣೆಯಿಂದ ಜಂಬೂ ಸವಾರಿ ಮೆರವಣಿಗೆ ನಡೆಸಿದರೆ, ರಾಜ್ಯದ ಗಡಿ ಭಾಗವಾದ ದೇವರ ಗಟ್ಟು ಎಂಬಲ್ಲಿ ಇದರ ಆಚರಣೆ ವಿಭಿನ್ನ ಅಷ್ಟೇ ಅಲ್ಲ, ವಿಚಿತ್ರವೂ ಕೂಡಾ. ಇಲ್ಲಿ ವಿಜಯ ದಶಮಿಯ ವೇಳೆ ದೇವರ ಉತ್ಸವ ಮೂರ್ತಿಗಾಗಿ ಗ್ರಾಮಸ್ಥರ ನಡುವೆ ಬಡಿಗೆಗಳಿಂದ ಹೊಡೆದಾಟವೇ ನಡೆಯುತ್ತದೆ.
ಇದು ನಿಮಗೆ ಅಚ್ಚರಿ ಅನ್ನಿಸಿದರೂ ಹೌದು. ಇಲ್ಲಿನ ಗಡಿಭಾಗದ ಜನರು ಬನ್ನಿ ಉತ್ಸವವನ್ನು ಕೋಲಿನ ಕಾಳಗದ ಹಬ್ಬವಾಗಿ ದಶಕಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಆಂಧ್ರದ ಭಕ್ತರು ಉತ್ಸವದಲ್ಲಿ ಭಾಗಿಯಾಗುತ್ತಾರೆ.
ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಪ್ರದೇಶದಲ್ಲಿ ವಿಜಯದಶಮಿಯನ್ನು ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವವಾಗಿ ಆಚರಿಸಲಾಗುತ್ತದೆ. ಆಂಧ್ರದ ನೆರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯಪ್ರದೇಶದಲ್ಲಿ ನಡೆಯುವ ಕಲ್ಯಾಣೋತ್ಸವದ ಬಳಿಕ ದೇವರ ವಿಗ್ರಹವನ್ನು ಪಾದಯಗಟ್ಟು, ರಾಕ್ಷಸಪದ, ಶಮಿವೃಕ್ಷ ಮತ್ತು ಉತ್ತುಬಸವನ ದೇವಾಲಯದ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.
ಮೆರವಣಿಗೆಯ ಸಂದರ್ಭದಲ್ಲಿ ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯತ್ನಿಸುತ್ತಾರೆ. ಎರಡು ಗುಂಪುಗಳು ವಿಗ್ರಹಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಕೋಲುಗಳಿಂದ ಪರಸ್ಪರ ಹೊಡೆದಾಡುತ್ತಾರೆ. ಒಂದು ಗುಂಪಿನಲ್ಲಿ ನೇರಣಿ, ನೇರಣಿಕಿತಾಂಡ, ಕೊತಪೇಟ ಗ್ರಾಮಗಳಿದ್ದರೆ, ಮತ್ತೊಂದು ಗುಂಪಿನಲ್ಲಿ ಅರಿಕೇರ, ಸುಳುವಾಯಿ, ಎಲ್ಲರ್ತಿ, ಬಿಳೇಹಾಳ್, ನಿದ್ರವತ್ತಿ, ಆಲೂರು ಗ್ರಾಮಗಳು ಇರುತ್ತವೆ. ಇದನ್ನು ಸ್ಥಳೀಯವಾಗಿ ಬನ್ನಿ ಉತ್ಸವಂ ಅಥವಾ ದೇವರಗಟ್ಟು ಕರ್ರಲ ಸಮರಂ ಎಂದು ಕರೆಯುತ್ತಾರೆ. ಮಧ್ಯರಾತ್ರಿ 1ರಿಂದ 3 ಗಂಟೆಯವರೆಗೆ ಇಂಥದ್ದೊಂದು ಕಾಳಗ ನಡೆಯುತ್ತದೆ. ಇದನ್ನು ನೋಡಲು, ಪಾಲ್ಗೊಳ್ಳಲು ಈ ಬೆಟ್ಟ ಪ್ರದೇಶದಿಂದ ಸಾವಿರಾರು ಜನರು ಬಂದು ಸೇರುತ್ತಾರೆ.
Laxmi News 24×7