ಚಿಕ್ಕೋಡಿ (ಬೆಳಗಾವಿ) : ದೇಶಾದ್ಯಂತ ಇವತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 156ನೇ ಜನ್ಮ ದಿನವನ್ನು ಆಚರಣೆ ಮಾಡಲಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಗಾಂಧಿ ಜಯಂತಿಯನ್ನು ಆಚರಿಸದೇ ಕರ್ತವ್ಯ ಲೋಪ ಎಸಗಿರುವ ಆರೋಪ ಕೇಳಿ ಬಂದಿದೆ.
ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಕೂಡ ಗಾಂಧಿ ಜಯಂತಿಯನ್ನು ಆಚರಿಸಿಕೊಂಡು ಬಂದು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಆದರೆ ಝುಂಜರವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 196ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಇವತ್ತು ಗಾಂಧಿ ಜಯಂತಿಯನ್ನು ಆಚರಿಸದೇ, ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆ ಗ್ರಾಮಸ್ಥರು ಶಿಕ್ಷಕರು ಹಾಗೂ ಎಸ್ಡಿಎಂಸಿ ವಿರುದ್ಧ ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ.![]()
ಮೇಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿ : ಈ ಕುರಿತು ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಮಲೆವಾಡಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ‘ಇವತ್ತು ಗಾಂಧಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಣೆ ಮಾಡಿಲ್ಲ. ಇಲ್ಲಿ ಶಿಕ್ಷಕರು ಯಾರೂ ಬಾರದೇ ಗಾಂಧೀಜಿ ಅವರಿಗೆ ಅಗೌರವ ತೋರಿದ್ದಾರೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ಈ ಶಾಲೆಯಲ್ಲಿ 196 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಈ ಶಿಕ್ಷಕರ ವರ್ತನೆ ನಮಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಚಿಕ್ಕೋಡಿ ಡಿಡಿಪಿಐ ಸೀತಾರಾಮು ಆರ್. ಎಸ್ ಅವರು ಹೇಳಿದ್ದೇನು?: ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಗಾಂಧಿ ಜಯಂತಿಯನ್ನು ಎಲ್ಲಾ ಶಿಕ್ಷಕರು ಶಾಲೆಯಲ್ಲಿ ಆಚರಣೆ ಮಾಡಬೇಕು. ಈ ಶಾಲೆಯಲ್ಲಿ ಯಾರೂ ಶಿಕ್ಷಕರು ರಜೆ ಪಡೆದುಕೊಂಡಿಲ್ಲ. ಒಬ್ಬರು ಶಿಕ್ಷಕರು ಗಾಂಧಿ ಜಯಂತಿ ಆಚರಣೆ ಮಾಡಿರುವುದಾಗಿ ನನಗೆ ಫೊಟೋ ಕಳುಹಿಸಿದ್ದಾರೆ. ಇಲ್ಲಿ ಏಳು ಜನ ಶಿಕ್ಷಕರು ಇದ್ದಾರೆ. ಓರ್ವ ಡಿ ದರ್ಜೆ ಸಿಬ್ಬಂದಿ ಇದ್ದಾರೆ. ಯಾರೂ ಗಾಂಧಿ ಜಯಂತಿಯನ್ನು ಆಚರಣೆ ಮಾಡಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Laxmi News 24×7