Breaking News

ಹುಕ್ಕೇರಿಯಲ್ಲಿ ಸೋಲಷ್ಟೇ ಆಗಿದೆ, ಮುಖಭಂಗ ಆಗಿಲ್ಲ: ಸತೀಶ ಜಾರಕಿಹೊಳಿ‌

Spread the love

ಬೆಳಗಾವಿ: ನಾನು ಜಿಲ್ಲಾ ಉಸ್ತುವಾರಿ ಸಚಿವ ಎನ್ನುವ ಒಂದೇ ಕಾರಣಕ್ಕೆ ಹುಕ್ಕೇರಿ ವಿದ್ಯುತ್ ಗ್ರಾಮೀಣ ಸಹಕಾರಿ ಸಂಘದ ಚುನಾವಣೆ ಹೆಚ್ಚು ಪ್ರಾಧಾನ್ಯತೆ ಪಡೆಯಿತು. ಇದರಲ್ಲಿ ನಮಗೆ ಸೋಲು ಅಷ್ಟೇ ಆಗಿದ್ದು, ಮುಖಭಂಗ ಆಗಿದೆ ಎನ್ನುವ ಪ್ರಶ್ನೆ ಬರಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.

ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಲು ಗೆಲುವು ಇದ್ದಿದ್ದೆ. ಸೋತೆವು ಅಂತಾ ಸುಮ್ಮನೆ ಕೂರಲು ಆಗುವುದಿಲ್ಲ. ಮುಂದೆ ಗೆಲುವು ಆಗಿಯೇ ಆಗುತ್ತದೆ. ನಮ್ಮ ಕಾರ್ಯಕರ್ತರ ರಕ್ಷಣೆಗೆ ಹಾಗೂ ಬೇಸ್ ಸಿದ್ಧಪಡಿಸಲು ಚುನಾವಣೆ ಮಾಡಿದ್ದೇವೆ. ಹೇಗೆ ಸೋತರೂ ಸೋಲು ಸೋಲೇ. ಮಾಡುವ ಎಲ್ಲಾ ಪ್ರಯತ್ನ ಮಾಡಿದ್ದೆವು. ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕಿತ್ತು‌. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.

ಅಭ್ಯರ್ಥಿಗಳಿಗೆ ಜಾಸ್ತಿ ವೋಟ್ ಹಾಕಿದ್ದರಿಂದ ಅವು ತಿರಸ್ಕೃತವಾಗಿ ನಮಗೆ ಸೋಲಾಗಿದೆ. ಕೆಟಗರಿ ಪ್ರಕಾರ ಏಳೆಂಟು ಸಾವಿರ ಮತಗಳು ಹಾಳಾಗಿವೆ. ಸಹಕಾರಿ ರಂಗ ನಮಗೆ ಹೊಸದು. ಆದರೂ ಕೂಡ ಹೆಚ್ಚು ಪ್ರಯತ್ನ ಹಾಕಿದ್ದೇವೆ. ನಾವು 12 ಸಾವಿರ ವೋಟ್ ಪಡೆದಿದ್ದೇವೆ. ಅವರು 20 ಸಾವಿರ ವೋಟ್ ಪಡೆದಿದ್ದಾರೆ. ಆದರೆ, ಅವರ ತಂತ್ರಗಾರಿಕೆ ತಿಳಿದುಕೊಳ್ಳಲು ಸಾಧ್ಯ ಆಗಲಿಲ್ಲ. ನಮ್ಮ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಇನ್ನೂ ಹೆಚ್ಚು ಸಕ್ರಿಯವಾಗಿ ಚುನಾವಣೆ ಮಾಡಬೇಕಿತ್ತು. ಅಲ್ಲದೇ ಮತದಾರರ ಮನವೊಲಿಸಲು ಆಗಲಿಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಹಣ ನಿಮ್ದು, ಗಾಡಿ ನಿಮ್ದು ಕತ್ತಿಗೆ ವೋಟ್ ಹಾಕಿದರು ಎಂಬ ಚರ್ಚೆಗೆ ಬಹಳಷ್ಟು ಜನರು ವೋಟ್ ಹಾಕಿ ನಮ್ಮ ಹತ್ತಿರ ಬಂದು ವಿಶ್ ಮಾಡಿ ಹೋದರು. ಆದರೆ, ಬಹಳ ಮತಗಳು ತಿರಸ್ಕಾರಗೊಂಡಿದ್ದರಿಂದ ಸಮಸ್ಯೆ ಆಗಿದೆ. ಹುಕ್ಕೇರಿಯಲ್ಲಿ ನಮ್ಮ ಬೇಸ್ ಇರಲಿಲ್ಲ. ಈಗ ಎಲ್ಲಾ ಊರಲ್ಲಿ ಕಾರ್ಯಕರ್ತರು ತಯಾರಾಗಿದ್ದಾರೆ. ಕಾಂಟ್ಯಾಕ್ಟ್ ಬಂದಿದೆ. ನಮ್ಮ ಬೇಸ್ ರೆಡಿಯಾಗಿದೆ. ಯಾವುದೇ ಚುನಾವಣೆಯಲ್ಲಿ ಒಂದೇ ಸಾರಿ ಗೆಲ್ಲುವುದು ಕಷ್ಟ. ದೊಡ್ಡ ದೊಡ್ಡ ನಾಯಕರು ಮೊದಲ ಚುನಾವಣೆಯಲ್ಲಿ ಸೋತವರೇ. ಇದು ನಮ್ಮ ಮೊದಲ ಚುನಾವಣೆ ಎಂದು ಸತೀಶ ಸಮಜಾಯಿಷಿ ನೀಡಿದರು.

ಜಾರಕಿಹೊಳಿ ಸಹೋದರರು ಲಿಂಗಾಯತ ವಿರೋಧಿ ಎಂಬ ವಿಚಾರಕ್ಕೆ ಇದು ತಾಲೂಕಿಗೆ ಸೀಮಿತವಾಗಿರುವ ಚುನಾವಣೆ. ಅಷ್ಟಕ್ಕೆ ಮಾತ್ರ ಮಾತಾಡಬೇಕು. ಇದು ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ವಿರೋಧಿಗಳು ಹುಕ್ಕೇರಿಯಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಬೇರೆ ತಾಲೂಕಿಗೆ ಅದು ಅನ್ವಯಿಸುವುದಿಲ್ಲ ಎಂದು ಹೇಳಿದರು.‌

ತಮ್ಮ ಕುಟುಂಬದ ವಿರುದ್ಧ ರಮೇಶ ಕತ್ತಿ ಮಾಡಿರುವ ವೈಯಕ್ತಿಕ ಟೀಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅವರು ಮಾತನಾಡಿದ ಹಾಗೆ ನಾವು ಮಾತಾಡಲು ಆಗಲ್ಲ. ಸೋಲಿನ ಬಗ್ಗೆ ಅಷ್ಟೇ ನಾವು ಹೇಳಬೇಕು. ರಮೇಶ ಕತ್ತಿ ಅವರು ತಮ್ಮ ಘನತೆ, ಗೌರವ, ವ್ಯಕ್ತಿತ್ವಕ್ಕೆ ತಕ್ಕಂತೆ ಮಾತಾಡಬೇಕು. ಒಂದು ಬಾರಿ ಎಂಪಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದವರು. ಅವರ ಇಡೀ ಕುಟುಂಬ ರಾಜಕಾರಣದಲ್ಲಿದೆ. ಬಾಯಿ ಇದೆ ಅಂತಾ ಮಾತನಾಡಬಾರದು ಎಂದು ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ಕತ್ತಿ ಮತ್ತು ಜೊಲ್ಲೆ ಅವರಿಗೆ ಜಗಳವಿತ್ತು. ಸುಮ್ಮನೇ ಜಾರಕಿಹೊಳಿ ಸಹೋದರರು ಎಂಟ್ರಿಕೊಟ್ಟರು ಎಂದು ತಮ್ಮ ಕಾರ್ಯಕರ್ತರೇ ಮಾತಾಡುತ್ತಿದ್ದಾರೆ ಎಂಬುದಕ್ಕೆ ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡಲು ನಾವು ಹೋಗುವುದು ಅನಿವಾರ್ಯ ಆಯಿತು. ನಾವು ಯಾರ ಪರವಾಗಿಯೂ ಹುಕ್ಕೇರಿಗೆ ಹೋಗಿಲ್ಲ ಎಂದ ಅವರು, ಎಲ್ಲೂ ಕೂಡ ಸ್ಟ್ಯಾಟರ್ಜಿ ಫೇಲ್ ಆಗಿರಲಿಲ್ಲ. ನಮ್ಮ ಇಡೀ ತಂಡ ಸರಿಯಾಗಿ ಕೆಲಸ ಮಾಡುವಲ್ಲಿ‌ ವಿಫಲವಾಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಗೋಕಾಕ್ ಮಾಡೆಲ್, ಡ್ರಗ್ಸ್ ಮಾಫಿಯಾ, ಜಾರಕಿಹೊಳಿ ಸಹೋದರರ ದಬ್ಬಾಳಿಕೆ ಇದೆ, ಆಸ್ತಿ ಬರೆಸಿಕೊಳ್ಳುತ್ತಾರೆ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿರುವುದು ಪರಿಣಾಮ ಬೀರಿತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ರೀತಿ ಭಾಷಣ, ಅಪಪ್ರಚಾರದಿಂದ ನಮಗೆ ಸೋಲು ಆಗಿಲ್ಲ. ನಮ್ಮ ಮತ ಹಾಕಿಸಿಕೊಳ್ಳುವಲ್ಲಿ ನಾವು ವಿಫಲರಾದೆವು. ಕಳೆದ 20 ವರ್ಷಗಳಿಂದ ಪ್ರತಿ ಚುನಾವಣೆಯಲ್ಲಿ ನಮ್ಮ‌ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇದ್ದಾರೆ. ಹಾಗಾಗಿ, ಇದೇನು ಹೊಸತಲ್ಲ ಎಂದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ