ಶಾಸಕ ಕೆ.ಸಿ.ವೀರೇಂದ್ರಗೆ 2 ದಿನ ಜಾಮೀನು ನೀಡುವ ಕುರಿತು ಪರಿಶೀಲಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಅಕ್ರಮ ಬೆಟ್ಟಿಂಗ್ ಆರೋಪದಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ದಸರಾ ಹಬ್ಬದ ಪ್ರಯುಕ್ತ 2 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿರುವ ಮನವಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರದ ಪರ ವಕೀಲರಿಗೆ ಇಂದು ನಿರ್ದೇಶನ ನೀಡಿತು.
ತನ್ನ ಪತಿಯನ್ನು ಬಂಧಿಸುವುದಕ್ಕೂ ಮುನ್ನ ಸೂಕ್ತ ಕಾರಣಗಳನ್ನು ನೀಡಿಲ್ಲದ ಕಾರಣ ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ವೀರೇಂದ್ರ ಪತ್ನಿ ಡಿ.ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ, ಈ ಕುರಿತ ವಿಚಾರಣೆಯನ್ನು ಸೆಪ್ಟಂಬರ್ 26ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದಸರಾ ಹಬ್ಬದ ಪರಿಣಾಮ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಜಾರಿ ನಿರ್ದೇಶನಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಅರ್ಜಿದಾರರ ಪತಿಗೆ ಜಾಮೀನು ಅಗತ್ಯವಿದ್ದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ಈ ಕುರಿತಂತೆ ಮಾಹಿತಿ ಪಡೆದು ತಿಳಿಸಲಾಗುವುದು ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಪೀಠ, ಕೇಂದ್ರ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ, ಅರ್ಜಿದಾರರ ಪತಿಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಅಧಿಕಾರಿಗಳಲ್ಲಿ ಮಾಹಿತಿ ಪಡೆಯಬಹುದು. ಅರ್ಜಿದಾರರು ಕೇವಲ ಎರಡು ದಿನಗಳ ಕಾಲ ಮಾತ್ರ ಜಾಮೀನು ಕೋರುತ್ತಿದ್ದಾರೆ. ಅಗತ್ಯ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಬಹುದಾಗಿದೆ. ಬಳಿಕ ಮತ್ತೆ ವಶಕ್ಕೆ ಪಡೆಯುವುದಕ್ಕೆ ಅವಕಾಶವಿರಲಿದೆ ಎಂದು ತಿಳಿಸಿತು.
ಮುಖ್ಯ ಅರ್ಜಿಯ ವಿಚಾರಣೆ: ಇದಕ್ಕೂ ಮುನ್ನ ಅರ್ಜಿ ದಾರರ ಪರ ವಕೀಲರು, ಅರ್ಜಿದಾರರ ಪತಿಯನ್ನು ಬಂಧಿಸಿರುವುದು ಕಾನೂನು ಬಾಹಿರ. ಯಾವುದೇ ನೋಟಿಸ್ ನೀಡದೆ, ಬಂಧನಕ್ಕೆ ಕಾರಣವನ್ನೂ ನೀಡದೆ ಬಂಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು, ಅರ್ಜಿದಾರರ ಪತಿ ಆನ್ಲೈನ್ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಆರೋಪ ಸಂಬಂಧ ಆರು ಎಫ್ಐಆರ್ಗಳು ದಾಖಲಾಗಿದ್ದು, ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಅವರ ಪತಿಯಿಂದ ವಶಪಡಿಸಿಕೊಂಡಿರುವ ಮೊಬೈಲ್ ಫೋನ್ನಲ್ಲಿ ಹಣ ಕಳೆದು ಕೊಂಡಿರುವವರು ನೋವಿನ ಮಾತುಗಳಿವೆ. ನಾವು ಹಣವನ್ನು ಕಳೆದುಕೊಂಡಿದ್ದೇವೆ. ನಮಗೆ ಮುಂದೆ ಬದುಕುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂಬ ಸಂದೇಶಗಳಿವೆ. ಇದು ವಂಚನೆ ಮಾಡಿರುವ ಅಂಶಗಳನ್ನು ವಿವರಿಸಲಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪತಿ ನಡೆಸಿರುವ ಅಪರಾಧ ಕೃತ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಆದಾಯವನ್ನು ಗಳಿಸಿದ್ದಾರೆ. ಅವರಿಗೆ ಗೋವಾ ಮತ್ತು ದುಬೈನಲ್ಲಿ ಮನೆಗಳನ್ನು ಮಾಡಿಕೊಂಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಅಲ್ಲದೆ, ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧರಗಳಿವೆ. ಅಲ್ಲದೆ, ವೀರೇಂದ್ರ ಅವರನ್ನು ನ್ಯಾಯಾಲಯದ ಮೂಲಕ ರಿಮ್ಯಾಂಡ್ ಆದೇಶವನ್ನು ಪಡೆದುಕೊಳ್ಳಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿದ್ದು, ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೆ, ಕಾನೂನು ಪ್ರಕಾರವೇ ಬಂಧನ ಮಾಡಲಾಗಿದೆ. ಹೀಗಾಗಿ ಅಕ್ರಮ ಬಂಧನ ಎಂದು ಹೇಳಲಾಗದು ಎಂದು ಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆದೇಶವನ್ನು ಅಕ್ಟೋಬರ್ 8ರಂದು ಪ್ರಕಟಿಸುವುದಾಗಿ ತಿಳಿಸಿತು.
ಪ್ರಕರಣದ ಹಿನ್ನೆಲೆ: ಅಕ್ರಮವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಶಾಸಕ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿರುವ ಪತ್ನಿ, ತನ್ನ ಪತಿಯನ್ನು ಕಾನೂನು ಬಾಹಿರವಾಗಿ ಬಂಧನ ಮಾಡಲಾಗಿದೆ. ಇದು ಸಂವಿಧಾನದ ಪರಿಚ್ಛೇದ 19 ಮತ್ತು 21ರಲ್ಲಿ ಲಭ್ಯವಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ತಕ್ಷಣ ವೀರೇಂದ್ರ ಅವರನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
Laxmi News 24×7