ಹುಬ್ಬಳ್ಳಿ: ಕೆಲವು ಕಮ್ಯೂನಿಸ್ಟ್ ಮೈಂಡ್ಸೆಟ್ನ ಸ್ವಾಮೀಜಿಗಳು ಹಿಂದೂ ಧರ್ಮದಿಂದ ಲಿಂಗಾಯತರನ್ನು ದೂರ ಮಾಡಲು ಸಂಚು ಹೂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಬಗ್ಗೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಸಾಮ್ಯತೆಗಳನ್ನು ಒತ್ತಿ ಹೇಳಿದರು. ದುರಾದೃಷ್ಟವಶಾತ್, ಕೆಲವು ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಕಂದಕ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸ್ವಾಮೀಜಿಗಳು ಲಿಂಗಾಯತ ಧರ್ಮ ಅಥವಾ ಶೈವರ ಉದ್ಧಾರದಲ್ಲಿ ಆಸಕ್ತಿ ಹೊಂದಿಲ್ಲ ಎಂದರು.
ಹಿಂದೂ ಧರ್ಮದ ಪದ್ಧತಿಗಳು ಮತ್ತು ಆಚರಣೆಗಳನ್ನು ಅವಮಾನಿಸುವುದೇ ಕೆಲವು ಮಠಾಧೀಶರ ಉದ್ಯೋಗವಾಗಿದೆ. ಬಸವಣ್ಣನವರ ತತ್ವಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಅವರಿಗೆ ಚಾಳಿಯಾಗಿಬಿಟ್ಟಿದೆ ಎಂದು ಟೀಕಿಸಿದರು.
ಪಾದಪೂಜೆ ಯಾಕೆ ಮಾಡಿಸಿಕೊಳ್ತೀರಿ?: ಹಿಂದೂ ಧರ್ಮದ ಆಚರಣೆಗಳನ್ನು ಅಪಮಾನಿಸುವ ನೀವು, ಬಸವಣ್ಣನ ತತ್ವವನ್ನಷ್ಟೇ ಅನುಸರಿಸುತ್ತೇವೆ ಎನ್ನುವ ನೀವು, ಪಾದ ಪೂಜೆ ಯಾಕೆ ಮಾಡಿಸಿಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದರು.
ಲಿಂಗಾಯತ ಮತ್ತು ವೀರಶೈವ ಧರ್ಮಗಳು ಇನ್ನೂ ಭಾರತ ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದಿಲ್ಲ. ಕೇಂದ್ರ ಸರ್ಕಾರ ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ಮಾನ್ಯತೆ ಕೊಟ್ಟಿಲ್ಲ. ಹೀಗಾಗಿ, ಧರ್ಮದಲ್ಲಿ ಹಿಂದೂ ಅಂತ, ಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿ ಬರೆಯಿಸಿ ಎಂದು ಕರೆ ಕೊಟ್ಟರು.
ಇಂದಿನ ಸಮಾವೇಶಕ್ಕೆ ಅಖಿಲ ವೀರಶೈವ ಮಹಾಸಭಾ ಹೆಸರಲ್ಲಿ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ. ವೀರಶೈವ ಬೇರೆ ಅಲ್ಲ, ಲಿಂಗಾಯತರು ಬೇರೆ ಅಲ್ಲ. ಎಲ್ಲರೂ ಲಿಂಗ ಪೂಜೆ ಮಾಡ್ತಾರೆ. ಕರ್ನಾಟಕದಲ್ಲಿ ಸಾಬರ ಸರ್ಕಾರವಿದೆ. ಮುಸ್ಲಿಮರಿಗೆ ಮೀಸಲಾತಿ ಕೊಡಲು ಬರಲ್ಲ. ಅಸಾಂವಿಧಾನಿಕವಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡಲಾಗಿದೆ. ಇದನ್ನು ಅಖಿಲ ಭಾರತ ವೀರಶೈವ ಮಹಾಸಭಾ ಯಾಕೆ ಪ್ರಶ್ನಿಸಲಿಲ್ಲ? ಮೂರು ಕುಟುಂಬಗಳ ನಡುವೆ ಅಖಿಲ ಭಾರತ ವೀರಶೈವ ಮಹಾಸಭಾ ಸಿಲುಕಿಕೊಂಡಿದೆ. ಯಡಿಯೂರಪ್ಪ, ಶಾಮನೂರು ಮತ್ತು ಖಂಡ್ರೆ ಕುಟುಂಬದ ನಡುವೆ ಸಿಲುಕಿದೆ. ಈ ಮೂವರೂ ಮಹಾ ಸಭಾದಿಂದ ಹೊರಬರಬೇಕು. ಯಡಿಯೂರಪ್ಪ ಮಹಾ ಭ್ರಷ್ಟ, ಅವರ ಉದ್ದೇಶ ಲಿಂಗಾಯತರಿಗೆ ಒಬಿಸಿ ಕೊಡೋದಲ್ಲ. ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ತಿದ್ದಾರೆ ಎಂದರು.
Laxmi News 24×7