ಮೈಸೂರು: ಈ ಬಾರಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಮಾಡಿಕೊಳ್ಳಲಾಗಿದೆ. ಸೆ.22 ರಿಂದ 29ನೇ ತಾರೀಕಿನವರೆಗೆ ಮೊದಲ ಹಂತದ ಭದ್ರತೆ ಮತ್ತು ಸೆ.30 ರಿಂದ ಅ.2ರವರೆಗೆ ಎರಡನೇ ಹಂತದ ಜಂಬೂಸವಾರಿ ಭದ್ರತೆ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.
ಇಂದು ಖಾಸಗಿ ಹೋಟೆಲ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದಸರಾದ ಜಂಬೂಸವಾರಿ ಮೆರವಣಿಗೆ ಹಾಗೂ ಸುರಕ್ಷತೆ, ಸುಗಮ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಯ ಸಿದ್ಧತೆ ಹಾಗೂ ಜಂಬೂಸವಾರಿ ಮೆರವಣಿಗೆಯ ಭದ್ರತೆ ಬಗ್ಗೆ ಪೊಲೀಸ್ ಅಯುಕ್ತರು ಮಾಹಿತಿ ನೀಡಿದರು.
ಈ ಬಾರಿ ಸೆ.22 ರಿಂದ ಅ.2ರವರೆಗೆ ದಸರಾ ಮಹೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ಕಲ್ಪಿಸಲು ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ದಸರಾಗೆ ಎರಡು ಹಂತದ ಭದ್ರತೆ: ಸೆ.22ರಿಂದ 29ರವರೆಗೆ ಮೊದಲ ಹಂತದ ಭದ್ರತೆ ಕೈಗೊಳ್ಳಲಾಗಿದೆ. ಇದರಲ್ಲಿ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ದಸರಾ ವಸ್ತು ಪ್ರದರ್ಶನ, ದಸರಾ ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ ನಡೆಯಲಿದೆ. ಜೊತೆಗೆ ಎರಡನೇ ಹಂತದ ಭದ್ರತೆಯಲ್ಲಿ ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ಸೆ.30 ರಿಂದ ಅ.2ರವರೆಗಿನ ಎರಡನೇ ಹಂತದ ಭದ್ರತೆಗಾಗಿ ಬೇರೆ ಕಡೆಯಿಂದ ಪೊಲೀಸ್ ಅಧಿಕಾರಿಗಳನ್ನು ಕರೆಸಲಾಗಿದೆ ಎಂದರು.
ಈ ಬಾರಿ ಎರಡು ಹಂತದ ದಸರಾ ಭದ್ರತೆಗೆ 5 ಎಸ್ಪಿಗಳು, 35 ಡಿವೈಎಸ್ಪಿಗಳು, 35 ಕೆಎಸ್ಆರ್ಪಿ ತುಕಡಿಗಳು, 15 ಕಾರ್ ಬಾರ್ ಡಿಎಆರ್ ತುಕಡಿ, 29 ಎಎಸ್ಸಿ ಟೀಮ್, 1 ಗರುಡ ಟೀಮ್, ಒಂದು ಎಆರ್ಎಫ್ ತಂಡ, 1,200 ಹೋಂ ಗಾರ್ಡ್ಸ್ ಸೇರಿ 6,384 ಮಂದಿ ಪೊಲೀಸ್ ಸಿಬ್ಬಂದಿಯನ್ನು ದಸರಾ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.
Laxmi News 24×7