ರಾಜ್ಯದಲ್ಲಿ ಸೆ.22ರಿಂದ ಜಾತಿ ಗಣತಿ; ನಿಮ್ಮ ಸಮೀಕ್ಷೆಯ ಕಾರ್ಯವಿಧಾನ ಹೀಗಿರಲಿದೆ
ಬೆಂಗಳೂರು: ರಾಜ್ಯದಲ್ಲಿ ಸೆಪ್ಟಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ಆರಂಭವಾಗಲಿದೆ. 16 ದಿನಗಳ ಕಾಲ ನಡೆಯಲಿರುವ ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಈ ಬಾರಿ ಕ್ಷಿಪ್ರ ಸಮಯದಲ್ಲಿ ಜಾತಿ ಗಣತಿ ನಡೆಸಲು ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಸಮೀಕ್ಷೆಯ ಕಾರ್ಯವಿಧಾನ ಹೇಗಿರಲಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಮತ್ತೆ ಜಾತಿ ಗಣತಿ ನಡೆಯುತ್ತಿದೆ. ಸುಮಾರು 1.75 ಲಕ್ಷ ಗಣತಿದಾರರ ಮೂಲಕ, ತಂತ್ರಜ್ಞಾನ ಬಳಸಿಕೊಂಡು ಕರಾರುವಾಕ್ ಹಾಗೂ ಜಾಗ್ರತೆಯಿಂದ ಸಮೀಕ್ಷೆ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ. 16 ದಿನಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.
60 ವಿವಿಧ ಪ್ರಶ್ನೆಗಳ ಮೂಲಕ ಗಣತಿದಾರರು ಸಮೀಕ್ಷೆ ನಡೆಸಲಿದ್ದಾರೆ. ಮೊಬೈಲ್ ಆ್ಯಪ್ ಬಳಸಿ, ಗಣತಿದಾರರು ಮಾಹಿತಿ ಎಂಟ್ರಿ ಮಾಡಲಿದ್ದಾರೆ. ಮನೆ, ಮನೆಗಳ ಸಮೀಕ್ಷೆ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸಮೀಕ್ಷೆಗೆ ಮನೆ ಗುರುತಿಸುವ ವಿಧಾನ ಹೇಗೆ? ಸಮೀಕ್ಷೆ ನಡೆಸಲು ಸಮೀಕ್ಷಾ ಬ್ಲಾಕಿನ ಭೌಗೋಳಿಕ ವ್ಯಾಪ್ತಿಯನ್ನು ನಿರ್ಧರಿಸಬೇಕಾಗಿದೆ. ಈ ಬಾರಿ ಸಮೀಕ್ಷೆಯಲ್ಲಿ ಮನೆಗಳಿಗೆ ಎಸ್ಕಾಂಗಳು ಒದಗಿಸಿರುವ ವಿದ್ಯುತ್ ಸಂಪರ್ಕದ ಆರ್.ಆರ್. ಮೀಟರ್ಗಳ ಆಧಾರದ ಮೇಲೆ ಸಮೀಕ್ಷಾ ಬ್ಲಾಕಿನ ವ್ಯಾಪ್ತಿಯನ್ನು ನಿರ್ಧರಿಸಲಾಗುತ್ತದೆ. ಸಮೀಕ್ಷಾ ಸಮಯದಲ್ಲಿ ಎಲ್ಲಾ ಮನೆಗಳು, ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಒಳಪಡಿಸಲು ಸಮೀಕ್ಷಾ ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆ ಗುರುತಿಸುವುದರ ಜೊತೆಗೆ, ವಸತಿ ರಹಿತ ಕುಟುಂಬಗಳು, ವ್ಯಕ್ತಿಗಳು ವಾಸಿಸುತ್ತಿರುವ ಸ್ಥಳ, ಪ್ರದೇಶಗಳನ್ನು ಗುರುತಿಸುವುದು ಅಗತ್ಯವಾಗಿದೆ.
2014-15ರಲ್ಲಿ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಮನೆಗಳನ್ನು ಗುರುತಿಸುವುದಕ್ಕಾಗಿ 2011ರ ಜನಗಣತಿ ಬ್ಲಾಕ್‌ಗಳನ್ನು ಸಮೀಕ್ಷಾ ಘಟಕವಾಗಿ ಪರಿಗಣಿಸಲಾಗಿತ್ತು. ಜನಗಣತಿ ಪ್ರಕ್ರಿಯೆಯಲ್ಲಿ ತಯಾರಿಸಿದ ಬ್ಲಾಕ್ ಲೇಔಟ್ ನಕ್ಷೆ ಹಾಗೂ ಸಂಕ್ಷಿಪ್ತ ಮನೆಪಟ್ಟಿಗಳ ಆಧಾರದ ಮೇಲೆ ಸಮೀಕ್ಷಕರು ಮನೆ-ಮನೆಗೆ ಭೇಟಿ ನೀಡಿ, ರಾಜ್ಯದ ಎಲ್ಲಾ ಕುಟುಂಬಗಳ/ಜನರ ಸಮೀಕ್ಷೆಯನ್ನು ನಿರ್ವಹಿಸಿದ್ದರು. ಆದರೆ 2011ರಲ್ಲಿ ತಯಾರಿಸಲಾದ ನಕ್ಷೆ ಮತ್ತು ಮನೆಪಟ್ಟಿಗಳು ಬಹಳ ಹಳೆಯದಾಗಿದ್ದು, ಅವು ಇಂದಿನ ವಾಸ್ತವಿಕ ಚಿತ್ರಣವನ್ನು ಪ್ರತಿಬಿಂಬಿಸದಿರುವ ಕಾರಣ ಪ್ರಸ್ತುತ ಸಮೀಕ್ಷೆಗಾಗಿ ಒಂದು ವಿನೂತನ ಪದ್ಧತಿಯನ್ನು ಅನ್ವೇಷಿಸಲಾಗಿದೆ.
Laxmi News 24×7