Breaking News

ಜಿಎಸ್​ಟಿ ಸರಳೀಕರಣದಿಂದ ಆದಾಯ ನಷ್ಟದ ಭೀತಿ: ಸಂದಿಗ್ಧತೆಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ಮುಂದೆ ಸೀಮಿತ ಆಯ್ಕೆ

Spread the love

ಬೆಂಗಳೂರು: ಜಿಎಸ್​ಟಿ (Goods and Services Tax) ತೆರಿಗೆ ಸರಳೀಕರಣ ಮಾಡುವ ಮೂಲಕ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಆದಾಯ ನಷ್ಟದ ಆತಂಕ ಎದುರಾಗಿದೆ. ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಆದರೆ, ಕೇಂದ್ರದ ಜಿಎಸ್​ಟಿ ದರ ಸರಳೀಕರಣ ಹಾಗೂ ಆದಾಯ ನಷ್ಟದ ಆತಂಕದ ಮಧ್ಯೆ ರಾಜ್ಯ ಸರ್ಕಾರ ಇದೀಗ ಸಂದಿಗ್ದತೆಯಲ್ಲಿ ಸಿಲುಕಿಕೊಂಡಿದೆ.

ಇನ್ಮುಂದೆ 5% ಮತ್ತು 18% ಮಾತ್ರ ಜಿಎಸ್​ಟಿ ಇರಲಿದ್ದು, ಐಶಾರಾಮಿ, ಟೊಬ್ಯಾಕೋ ಸಂಬಂಧಿತ ಉತ್ಪನ್ನಗಳಿಗೆ 40% ಜಿಎಸ್​ಟಿ ವಿಧಿಸಲಾಗುತ್ತದೆ. ಜಿಎಸ್​ಟಿ ದರ ಸರಳೀಕರಣವು ಜನರಿಗೆ ಸಿಹಿ ಸುದ್ದಿಯಾದರೂ ಈ ಮಾರ್ಪಾಡು ರಾಜ್ಯ ಸರ್ಕಾರವನ್ನು ಆತಂಕಕ್ಕೆ ತಳ್ಳಿದೆ. ಈಗಾಗಲೇ ಪಂಚ ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ, ಜಿಎಸ್​ಟಿ ದರ ಸರಳೀಕರಣದಿಂದ ಮತ್ತಷ್ಟು ಆದಾಯ ನಷ್ಟದ ಭೀತಿಗೆ ಸಿಲುಕಿದೆ.

ಕರ್ನಾಟಕ ಸರ್ಕಾರ ಜಿಎಸ್​ಟಿ ದರ ಸರಳೀಕರಣದಿಂದ ವಾರ್ಷಿಕ ಸುಮಾರು 15,000 ಕೋಟಿ ರೂ. ಹೆಚ್ಚುವರಿ ಆದಾಯ ನಷ್ಟದ ಅಂದಾಜು ಮಾಡಿದೆ. ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣದ ಕಸರತ್ತು ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಜಿಎಸ್​ಟಿ ದರ ಸರಳೀಕರಣ ಅಡ್ಡಗತ್ತರಿಯಲ್ಲಿ ಸಿಲುಕಿಸಿದಂತಾಗಿದೆ. ದರ ಸರಳೀಕರಣವನ್ನು ಸ್ವಾಗತಿಸಿದ್ದರೂ, ಇತ್ತ ಆದಾಯ ನಷ್ಟದ ಭೀತಿ ಹೆಚ್ಚಾಗಿ ಕಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಆದಾಯ ಸಂಗ್ರಹದ ತೆಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ.‌

ಆದಾಯ ನಷ್ಟದ ಲೆಕ್ಕಾಚಾರ ಏನು? ರಾಜ್ಯ ಸರ್ಕಾರ ಹೇಳುವಂತೆ ಈ ಜಿಎಸ್​ಟಿ ದರ ಸರಳೀಕರಣದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 15,000 ಕೋಟಿ. ರೂ.ನಷ್ಟು ಹೆಚ್ಚುವರಿ ಆದಾಯ ನಷ್ಟದ ಅಂದಾಜು ಮಾಡಿದೆ. ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸಚಿವ ಕೃಷ್ಣ ಬೈರೇಗೌಡ ವಿವರಿಸುವಂತೆ, ಜಿಎಸ್​ಟಿ ಬಂದಾಗಿನಿಂದಲೂ ಈವರೆಗೆ ಹಂತ ಹಂತವಾಗಿ ತೆರಿಗೆ ಕಡಿತ ಮಾಡಲಾಗಿದೆ. ಜಿಎಸ್​ಟಿ ಜಾರಿಯಾಗುವ ಮುನ್ನ ನಿವ್ವಳ ತೆರಿಗೆ ದರ 14% ಇದ್ದರೆ, ಈಗ ಅದು 11% ದರ ಇದೆ.‌ ಸರಳೀಕರಣ ಮಾಡುವುದರಿಂದ ಅದರಲ್ಲಿ ಮತ್ತೆ 1%ರಷ್ಟು ಕಡಿತವಾಗಿ ಸುಮಾರು ಅಂದಾಜು 10%ಗೆ ಇಳಿಕೆಯಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ವ್ಯಾಟ್ ಇದ್ದಾಗ 3.6% ಆದಾಯ ಬರುತ್ತಿತ್ತು. ಈಗ 2.9% ಮಾತ್ರ ಆದಾಯ ಬರುತ್ತಿದೆ. ಈಗ ರಾಜ್ಯದ ಜಿಎಸ್​ಡಿಪಿಯ (Gross State Domestic Product) 2.9%ರಷ್ಟು ಆದಾಯ ಬರುತ್ತಿದೆ. ಇದರಿಂದ ಕರ್ನಾಟಕದಲ್ಲಿ 2024-25ರಲ್ಲಿ 30,677 ಕೋಟಿ ರೂ. ಆದಾಯ ಖೋತಾ ಆಗಿದೆ. 2023-24ರಲ್ಲಿ 24,170 ಕೋಟಿ ರೂ. ಮತ್ತು 2022-23ರಲ್ಲಿ 22,654 ಕೋಟಿ ಆದಾಯ ಖೋತ ಆಗಿತ್ತು. ಕೇಂದ್ರದ ರಾಜ್ಯದ ತೆರಿಗೆ ಪಾಲಿನಲ್ಲಿ 2016-17ಗೆ ಮತ್ತು 2024-25ಕ್ಕೆ ಹೋಲಿಕೆ ಮಾಡಿದರೆ ರಾಜ್ಯಕ್ಕೆ 21,977 ಕೋಟಿ ರಷ್ಟು ಕಡಿತವಾಗಿದೆ. ಅದೇ ರೀತಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನದಲ್ಲಿ 18,880 ಕೋಟಿ ರೂ. ಕಡಿತವಾಗಿದೆ. ಆ ಮೂಲಕ ಇವೆರಡರಿಂದ 40,857 ಕೋಟಿ ರೂ. ಒಟ್ಟು ಕಡಿತವಾಗಿದೆ. ಕೇಂದ್ರದ ತೆರಿಗೆಯಲ್ಲಿ ನಮ್ಮ ಪಾಲು 35%ರಿಂದ 23%ಗೆ ಇಳಿದಿದೆ. ಕೇಂದ್ರದ ಈ ಎಲ್ಲಾ ತೀರ್ಮಾನಗಳಿಂದ ನಮಗೆ ಆಗಿರುವ ಆದಾಯ ಖೋತಾ ವಾರ್ಷಿಕ 70,000 ಕೋಟಿ ರೂ. ಹೊಸ ಜಿಎಸ್​ಟಿ ದರಗಳಿಂದ ರಾಜ್ಯಕ್ಕೆ ಇನ್ನೂ 15,000 ಕೋಟಿ ರೂ‌.‌ ಹೆಚ್ಚುವರಿ ಆದಾಯ ನಷ್ಟ ಆಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ