ಚಿಕ್ಕಬಳ್ಳಾಪುರ: ವೃದ್ಧ ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಹಂಚಿಕೆ ವಿಚಾರಕ್ಕೆ ಮೂವರು ಸಹೋದರರ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ನರಸಿಂಹಮೂರ್ತಿ (45) ಕೊಲೆಯಾದ ಸಹೋದರ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳಾದ ರಾಮಾಂಜಿ (39) ಮತ್ತು ಗಂಗಾಧರಪ್ಪ (39) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೌರಿಬಿದನೂರು ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ನರಸಿಂಹಮೂರ್ತಿ ಮತ್ತು ಆರೋಪಿಗಳಾದ ರಾಮಾಂಜಿ ಹಾಗೂ ಗಂಗಾಧರಪ್ಪ ಒಡಹುಟ್ಟಿದ ಸಹೋದರರು. ಇವರ ತಂದೆ ಹನುಮಂತರಾಯಪ್ಪ ಬೆಸ್ಕಾಂ ಉದ್ಯೋಗಿಯಾಗಿದ್ದರು. ಇವರ ಮರಣದ ನಂತರ ಪತ್ನಿಗೆ ಪಿಂಚಣಿ ಬರುತ್ತಿತ್ತು. ತಾಯಿ ಬಳಿ ಪಿಂಚಣಿ ಹಣ ಹಂಚಿಕೊಳ್ಳುವ ವಿಚಾರಕ್ಕೆ ನಡೆದ ಜಗಳವು ಕೊಲೆಗೆ ಕಾರಣವಾಗಿದೆ.
ಎಸ್ಪಿ ಪ್ರತಿಕ್ರಿಯೆ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ”ಮೂವರು ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೂವರಿಗೂ ಮದುವೆಯಾಗಿತ್ತು. ಆದರೆ, ಕುಡಿತಕ್ಕೆ ದಾಸರಾಗಿದ್ದ ಇವರ ವರ್ತನೆಗೆ ಬೇಸತ್ತು ಹೆಂಡತಿ ಹಾಗೂ ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಹೀಗಾಗಿ, ತಾಯಿಯ ಜೊತೆಯಲ್ಲಿ ಮೂವರು ವಾಸವಾಗಿದ್ದರು” ಎಂದರು.
”ಸೆಪ್ಟೆಂಬರ್ 3 ರಾತ್ರಿ ಪಿಂಚಣಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿದ್ದು, ರಾಮಾಂಜಿ ಮತ್ತು ಗಂಗಾಧರಪ್ಪ ಕೋಲಿನಿಂದ ಹೊಡೆದು ಅಣ್ಣನಾದ ನರಸಿಂಹಮೂರ್ತಿಯನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ” ಎಂದು ಎಸ್ಪಿ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್, ಇನ್ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ಶಾಲೆಯಿಂದ ಮಗನನ್ನು ಸ್ಕೂಟರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅಶ್ರಫ್ (33) ಬಂಧಿತ ಆರೋಪಿ. ಮಹಿಳೆಯು ಸೆ.3ರಂದು ಸಂಜೆ, ದ್ವಿಚಕ್ರ ವಾಹನದಲ್ಲಿ ತನ್ನ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದರು. ಮನೆಯ ಸಮೀಪ ತಲುಪುತ್ತಿದ್ದಂತೆ, ಆರೋಪಿ ಅಶ್ರಫ್ ಕತ್ತಿಯನ್ನು ಹಿಡಿದುಕೊಂಡು ಬಂದು ಸ್ಕೂಟರಿನಲ್ಲಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಕತ್ತಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ, ಮಹಿಳೆಯ ಬೆರಳುಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi News 24×7