ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶ ಮೂರ್ತಿಗಳು ಒಂದಕ್ಕಿಂತ ಒಂದು ವಿಶಿಷ್ಟವಾಗಿವೆ. ಆಕರ್ಷಕ ಅಲಂಕಾರ, ಮಂಟಪಗಳು ಗಮನ ಸೆಳೆಯುತ್ತಿವೆ. ಇಲ್ಲೊಂದು ಮಂಡಳಿ ‘ಆಪರೇಷನ್ ಸಿಂಧೂರ’ ಟಚ್ ನೀಡಿದ್ದು, ಗಣೇಶನ ಜೊತೆಗೆ ಭಾರತೀಯ ಸೈನಿಕರಿಗೂ ಪೂಜೆ ಸಲ್ಲಿಸುವ ಮೂಲಕ ದೇಶಭಕ್ತಿ ಮೆರೆಯುತ್ತಿದೆ.
ಒಂದೆಡೆ ಮಂಟಪದ ಹೊರಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಮನೆ ಮಾತಾಗಿದ್ದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾವಚಿತ್ರಗಳು. ಮತ್ತೊಂದೆಡೆ, ಮಂಟಪದೊಳಗೆ ಕಾಲಿಡುತ್ತಿದ್ದಂತೆ ಸ್ವಾತಂತ್ರ್ಯ ಸೇನಾನಿಗಳ ದರ್ಶನ. ಗಣೇಶ ಮೂರ್ತಿ ಅಕ್ಕ ಪಕ್ಕದಲ್ಲಿ ಇಬ್ಬರು ಸೈನಿಕರ ಮೂರ್ತಿಗಳು, ಹಿಂಭಾಗದಲ್ಲಿ ಭಾರತ ಮಾತೆ ಮತ್ತು ಶಿವಾಜಿ ಮಹಾರಾಜರ ಭಾವಚಿತ್ರಗಳು ನೋಡುಗರಲ್ಲಿ ದೇಶಾಭಿಮಾನ ಮೂಡಿಸುತ್ತಿವೆ. ಅದರಲ್ಲೂ ಗಣೇಶನ ಜೊತೆಗೆ ಭಾರತೀಯ ಸೈನಿಕರಿಗೂ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಭಾರತ್ ಮಾತಾ ಕೀ ಜಯ್ ಎಂಬ ಘೋಷಣೆಗಳು ಮೊಳಗುತ್ತಿವೆ. ಇಲ್ಲಿ ಭಕ್ತಿಯ ಜೊತೆಗೆ ದೇಶಾಭಿಮಾನದ ಕಿಚ್ಚೂ ಮೇಳೈಸಿದೆ.
ಹೌದು, ಈ ಎಲ್ಲ ದೃಶ್ಯಗಳು ಬೆಳಗಾವಿ ಶಹಾಪುರದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್ ಸಾರ್ವಜನಿಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮಂಟಪದಲ್ಲಿ ಕಂಡುಬಂತು. ನಮ್ಮ ದೇಶದ ಹೆಮ್ಮೆಯ ಸೈನಿಕರ ಜೊತೆಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್, ಕ್ರಾಂತಿಕಾರಿ ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲ್, ಭಾರತದ ಕೋಗಿಲೆ ಸರೋಜಿನಿ ನಾಯ್ಡು, ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಭಾವಚಿತ್ರಗಳನ್ನು ಮಂಟಪದೊಳಗೆ ಪ್ರದರ್ಶಿಸಿರುವುದು ವಿಶೇಷ.
ಮಂಡಳಿ ಪ್ರತಿನಿಧಿ ಸಂತೋಷ ವ್ಯಾಸ ಮಾತನಾಡಿ, ನಮ್ಮ ದೇಶದ ನಾಗರಿಕರನ್ನು ಪಾಕಿಸ್ತಾನಿ ಉಗ್ರರು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಮ್ಮ ಹೆಮ್ಮೆಯ ಸೈನಿಕರು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿದ್ದರು. ಹಾಗಾಗಿ, ನಮ್ಮ ಸೈನಿಕರ ಮೇಲಿನ ಅಭಿಮಾನಕ್ಕಾಗಿ ಈ ಬಾರಿಯ ಗಣೇಶೋತ್ಸವದಲ್ಲಿ ಆಪರೇಷನ್ ಸಿಂಧೂರ ಥೀಮ್ ಮಾಡಿದ್ದೇವೆ. ಗಣೇಶನ ಮಂತ್ರದ ಜೊತೆಗೆ ದೇಶಭಕ್ತಿ ಗೀತೆಯನ್ನು ಮೊಳಗಿಸುತ್ತಿದ್ದೇವೆ ಎಂದರು.
Laxmi News 24×7