Breaking News

ಮೈಸೂರಿನಿಂದ ಧರ್ಮಸ್ಥಳಕ್ಕೆ ಬೃಹತ್ ಕಾರು ರ‍್ಯಾಲಿ

Spread the love

ಮೈಸೂರು: ಧರ್ಮಸ್ಥಳದ ಪಾವಿತ್ರ್ಯತೆ ಉಳಿಸಲು ಮೈಸೂರಿನಿಂದ ಮಾಜಿ ಸಚಿವ ಸಾ‌.ರಾ.ಮಹೇಶ್ ಅವರ​ ನೇತೃತ್ವದಲ್ಲಿ ಇಂದು ಧರ್ಮಸ್ಥಳಕ್ಕೆ ಬೃಹತ್ ಕಾರು ರ‍್ಯಾಲಿ ತೆರಳಿತು.

ದಟ್ಟಗಳ್ಳಿಯಲ್ಲಿರುವ ಸಾ.ರಾ‌‌.ಕನ್ವೆನ್ಷನ್ ಹಾಲ್ ಮುಂಭಾಗದ ಗಣಪತಿ ದೇವಸ್ಥಾನದಲ್ಲಿ ಸಾ.ರಾ.ಮಹೇಶ್ ಹಾಗೂ ಜೆಡಿಎಸ್ ಮುಖಂಡರು ಪೂಜೆ ಸಲ್ಲಿಸಿದರು. ನಂತರ ರ‍್ಯಾಲಿಗೆ ಚಾಲನೆ ನೀಡಲಾಯಿತು

ಈ ಸಂದರ್ಭದಲ್ಲಿ ಸಾ.ರಾ.ಮಹೇಶ್ ಮಾತನಾಡಿ, “ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಬಂದಾಗ ಬಹಳ ನೋವಾಗಿತ್ತು‌. ಈಗ ಸತ್ಯ ಹೊರಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್​ಐಟಿ ನಿಷ್ಪಕ್ಷವಾಗಿ ತನಿಖೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಜೆಡಿಎಸ್​ ಎಂಎಲ್​ಸಿಗಳಾದ ಕೆ.ವಿವೇಕಾನಂದ, ಸಿ.ಎನ್​.ಮಂಜೇಗೌಡ ಇತರ ಮುಖಂಡರು ಜೊತೆಗಿದ್ದರು.

ಕಾಣದ ಕೈಗಳ ಬಂಧನಕ್ಕೆ ಸಾ.ರಾ.ಮಹೇಶ್ ಆಗ್ರಹ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ನಿನ್ನೆ (ಭಾನುವಾರ) ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದ್ದರು. ಧರ್ಮಸ್ಥಳದ ವಿರುದ್ಧ ಅಪಪ್ರಚಾರವೆಸಗಿ, ಕಪ್ಪುಚುಕ್ಕೆ ತರಲು ಯತ್ನಿಸಿದ ಅನಾಮಿಕನೊಬ್ಬನನ್ನು ಬಂಧಿಸಿದರೆ ಸಾಲದು, ಷಡ್ಯಂತ್ರದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕು ಎಂದಿದ್ದರು.

ಅಲ್ಲದೆ, ರಾಜ್ಯದ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ನಿಜವಾಗಿದ್ದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಸತ್ಯ ಹೊರತರಬೇಕು. ದಕ್ಷಿಣ ಭಾರತದಲ್ಲೇ ಸೂಕ್ಷ್ಮಾತಿಸೂಕ್ಷ್ಮ ಸಮಾಜದ ಧಾರ್ಮಿಕ ಟ್ರಸ್ಟ್ ಆಗಿರುವ ಧರ್ಮಸ್ಥಳದಲ್ಲಿ ನೂರಾರು ವರ್ಷಗಳಿಂದ ಒಂದು ಹೆಣವನ್ನು ಹೂಳುವುದೇ ಕಷ್ಟಕರ. ಅಂತಹದರಲ್ಲಿ ನೂರಾರು ಹೆಣಗಳನ್ನು ಹೂಳುವುದಕ್ಕೆ ಸಾಧ್ಯವಿಲ್ಲ. ಒಬ್ಬನೇ ನಾಲ್ಕು ಅಡಿ ಗುಂಡಿ ತೋಡಿ ಹೂಳುವುದಕ್ಕೂ ಸಾಧ್ಯವೇ ಇಲ್ಲ ಎಂದು ಹೇಳಿದ್ದರು.

NIA ತನಿಖೆಗೆ ಅಶ್ವತ್ಥ್​​ ನಾರಾಯಣ್ ಒತ್ತಾಯ: ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಅವರು ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹಿಂದೂ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರದ ಹಿಂದೆ ಯಾರ ಕೈವಾಡವಿದೆ ಅನ್ನೋದು ಬಯಲಾಗಬೇಕು. ಇದಕ್ಕಾಗಿ ಎನ್ಐಎ ತನಿಖೆ ಆಗಬೇಕು ಅಂತ ನಮ್ಮ ಪಕ್ಷ ಆಗ್ರಹಿಸಿದೆ ಎಂದು ಹೇಳಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವ ಸೂತ್ರಧಾರಿಗಳನ್ನು ಬಂಧಿಸಬೇಕು ಎಂದು ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ ಆಗ್ರಹಿಸಿದ್ದರು. ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚಿಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ್ದ ಅವರು, ಬೆಂಗಳೂರಿನ ಶಾಸಕರು, ಅನೇಕ ಭಕ್ತರು ಧರ್ಮಸ್ಥಳಕ್ಕೆ ಆನೇಕಲ್​ನಿಂದ 400 ವಾಹನಗಳಲ್ಲಿ ತೆರಳುತ್ತಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಜಯನಗರ, ಬಿಟಿಎಂ ಲೇಔಟ್​ನಿಂದ 200 ವಾಹನಗಳು ತೆರಳಲಿವೆ. 400 ಕಾರುಗಳಲ್ಲಿ 2 ಸಾವಿರ ಜನರು ಧರ್ಮಸ್ಥಳಕ್ಕೆ ತೆರಳುತ್ತೇವೆ. ಆರ್​ಎಸ್​ಎಸ್​ ಮುಖಂಡರು, ಸಂಸದ ತೇಜಸ್ವಿ ಸೂರ್ಯ, ವಿಶ್ವ ಹಿಂದೂ ಪರಿಷತ್ ಮುಖಂಡರು ಈ ಯಾತ್ರೆಗೆ ಚಾಲನೆ ನೀಡುತ್ತಾರೆ ಎಂದು ತಿಳಿಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ