ನೆಲಮಂಗಲ: ಬೈಕ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಅಪಘಾತ ನಡೆದಿದೆ.
ಬೈಕ್ನಲ್ಲಿದ್ದ ಫಾರೆಸ್ಟ್ ಗಾರ್ಡ್ ಕೆಂಪರಾಜು, ಸೆಂಟ್ರಿಂಗ್ ಕೆಲಸ ಮಾಡುವ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ: ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಿಕೆಂಡ್ ಹಿನ್ನೆಲೆ ಊರಿಗೆ ಹೋಗಿದ್ದ ಜನರು ಇಂದು ಬೆಂಗಳೂರಿಗೆ ವಾಪಸ್ ಬರುತ್ತಾರೆ. ಈ ಸಮಯದಲ್ಲಿ ನೆಲಮಂಗಲದ ಬಳಿ ವಾಹನಗಳ ದಟ್ಟಣೆ ಇರುವುದು ಇದರ ಜೊತೆಯಲ್ಲಿ ರಸ್ತೆ ಅಗಲೀಕರಣದ ಕಾಮಾಗಾರಿ ನಡೆಯುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದರು.
ಭಾನುವಾರ ಮಧ್ಯಾಹ್ನ 12:15ರ ಸಮಯದಲ್ಲಿ ಟಿವಿಎಸ್ ವಿಕ್ಟರ್ ಗಾಡಿಯಲ್ಲಿದ್ದವರು ದಾಬಸ್ ಪೇಟೆಯಿಂದ ಬೆಂಗಳೂರು ಕಡೆ ಬರುತ್ತಿದ್ದ ವೇಳೆ ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಕ್ಯಾಂಟರ್ ನಡುವೆ ಅಪಘಾತ ವಾಗಿದೆ, ಬೈಕ್ ಮುಂಬದಿಯ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದರು, ಮತ್ತೊಬ್ಬ ಸವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದರು.
ಈ ಪ್ರದೇಶದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಪರಿಶೀಲನೆ ಮಾಡಲಾಗುತ್ತಿದೆ, ರಸ್ತೆ ಅಗಲೀಕರಣ ಕಾಮಗಾರಿ ಮುಕ್ತಾಯವಾದರೆ. ವಾಹನ ಸುಗಮ ಸಂಚಾರಕ್ಕೆ ಅವಕಾಶ ಸಿಗುವುದು, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆಗೂ ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದರು.
ದೇವನಹಳ್ಳಿಯಲ್ಲಿ ಫ್ಲೈಓವರ್ ಮೇಲಿಂದ ಬಿದ್ದು ಸಾವು: ಫ್ಲೈಓವರ್ ಮೇಲೆ ಒನ್ ವೇಯಲ್ಲಿ ಅತಿವೇಗವಾಗಿ ಬಂದ ಕಾರು, ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ದೇವನಹಳ್ಳಿ ಸಮೀಪದ ಬಚ್ಚಹಳ್ಳಿ ಗೇಟ್ ಫ್ಲೈಓವರ್ ಮೇಲೆ ಘಟನೆ ನಡೆದಿದ್ದು, ಹಿಟ್ ಅಂಡ್ ರನ್ಗೆ ಬೈಕ್ ನಲ್ಲಿದ್ದ ಮಹಿಳಾ ಸವಾರ ನೇತ್ರಾವತಿ (31) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಆಕೆಯ ಪತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತ ಮಹಿಳೆ ನೇತ್ರಾವತಿ ಬಾಣಸವಾಡಿ ಮೂಲದವರಾಗಿದ್ದು, ಟೀ ಅಂಗಡಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಗಂಡನ ಜೊತೆಯಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆ ಬರುವಾಗ ಘಟನೆ ಸಂಭವಿಸಿದೆ, ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.
ಒನ್ ವೇ ಫ್ಲೈಓವರ್ ಮೇಲೆ ಅತಿವೇಗವಾಗಿ ಬಂದ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನೇತ್ರಾವತಿ ಫ್ಲೈಓವರ್ ಮೇಲಿಂದ ಬಿದ್ದಿದ್ದಾರೆ, ತಲೆಗೆ ತೀರ್ವ ಸ್ವರೂಪದ ಪೆಟ್ಟು ಬಿದ್ದ ಹಿನ್ನೆಲೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆಯ ಗಂಡ ಬೈಕ್ ಎಡಭಾಗಕ್ಕೆ ಬಿದ್ದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸ್ಥಳೀಯರು ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
Laxmi News 24×7