Breaking News

ಉನ್ನತ ಶಿಕ್ಷಣಕ್ಕೆ ಸರ್ಕಾರಿ ಸೇವಾ ನಿರತ ವೈದ್ಯರನ್ನು ಬಿಡುಗಡೆಗೊಳಿಸದ ಸರ್ಕಾರ ಕ್ರಮಕ್ಕೆ ಹೈಕೋರ್ಟ್​ ತರಾಟೆ

Spread the love

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾನಿರತ ವೈದ್ಯರಿಗೆ ಉನ್ನತ ಶಿಕ್ಷಣ ಪಡೆಯಲು ಸೇವೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯ ನೀಡಿದ ಆದೇಶ ಪಾಲಿಸದ ಸರ್ಕಾರದ ಕ್ರಮವನ್ನು ಹೈಕೋರ್ಟ್​ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಉನ್ನತ ಶಿಕ್ಷಣ ಪಡೆಯಲು ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2025ರ ಜೂನ್ 24ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪಾಲಿಸದ ಆರೋಗ್ಯ ಇಲಾಖೆಯ ಕ್ರಮ ಪ್ರಶ್ನಿಸಿ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬಾಚಿಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಡಿಎಂಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಎಂ. ಶಿವರಾಜ ಸೇರಿ ಇತರೆ 22 ಮಂದಿ ವೈದ್ಯರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ. ಸಿ.ಎ. ಜೋಶಿ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೆ, ನ್ಯಾಯಾಂಗ ನಿಂದನೆಯಡಿ ಆರೋಪ ನಿಗದಿಪಡಿಸಲು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶಿಸಿದೆ.

ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿ ಎರಡು ತಿಂಗಳಾಗುತ್ತಾ ಬಂದಿದೆ. ಆದರೂ ಈ ಸಂಬಂಧ ಇಲಾಖೆ ಅದನ್ನು ಪಾಲನೆ ಮಾಡಿಲ್ಲ. ಇದು ನ್ಯಾಯಾಲಯದ ಆದೇಶ ಎಂದು ಗೊತ್ತಿಲ್ಲವೇ ಎಂದು ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾದರೆ ಕೋರ್ಟ್ ಆದೇಶಕ್ಕೆ ತಡೆ ಸಿಕ್ಕಂತೆ ಎಂದು ಸರ್ಕಾರ ಭಾವಿಸಿದಂತಿದೆ. ಒಂದು ತಿಂಗಳಲ್ಲಿ 300ಕ್ಕೂ ಅಧಿಕ ವಿವಿಧ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಗಮನಿಸಲಾಗಿದೆ. ಸರ್ಕಾರದ ಧೋರಣೆ ಇದೇ ರೀತಿ ಇದೆ. ಇದಕ್ಕೂಂದು ಅಂತ್ಯ ಹೇಳಬೇಕಿದೆ. ಆದ್ದರಿಂದ ನ್ಯಾಯಾಲಯದ ಆದೇಶ ಪಾಲಿಸದೆ ‘ಉದ್ದೇಶಪೂರ್ವಕ ಅಸಹಕಾರ’ ತೋರಲಾಗುತ್ತಿದೆ. ಹಾಗಾಗಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಆಯುಕ್ತ ಕೆ. ಬಿ. ಶಿವಕುಮಾರ್, ಶುಕ್ರವಾರ (ಆ.22) ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗಬೇಕು. ನ್ಯಾಯಾಂಗ ನಿಂದನೆಯಡಿ ಅವರ ವಿರುದ್ಧ ಆರೋಪ ನಿಗದಿಪಡಿಸಲಾಗುವುದು ಎಂದು ಆದೇಶಿಸಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ