Breaking News

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the love

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, 200 ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಈ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ಓರ್ವ ಮಹಿಳೆ ಅಳಲು ತೋಡಿಕೊಂಡರು.

ಉಕ್ಕಿ ಹರಿಯುತ್ತಿರುವ ನದಿಗಳು: ಸತತ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಆ ಕಡೆ ಕೃಷ್ಣೆ ಆರ್ಭಟಿಸುತ್ತಿದ್ದರೆ, ಇತ್ತ ಘಟಪ್ರಭೆ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾಳೆ. 65 ಸಾವಿರ ಕ್ಯೂಸೆಕ್ ಘಟಪ್ರಭಾ ನದಿಗೆ ಹರಿದು ಬರುತ್ತಿರುವುದರಿಂದ ಗೋಕಾಕಿನಲ್ಲಿ ಅವಾಂತರವೇ ಸೃಷ್ಟಿಯಾಗಿದೆ.

ಗೋಕಾಕ್ ನಗರದ ಉಪ್ಪಾರ ಗಲ್ಲಿ, ಬೋಜಗಾರ ಗಲ್ಲಿ, ದಾಳಂಬರಿತೋಟ, ಹಳೆ ದನದ ಪೇಟೆ ಸೇರಿ ಮತ್ತಿತರ ಪ್ರದೇಶಗಳ ಮನೆಗಳಿಗೆ ನಿನ್ನೆ (ಮಂಗಳವಾರ) ಮಧ್ಯರಾತ್ರಿಯೇ ನೀರು ನುಗ್ಗಿದೆ. ಇದರಿಂದಾಗಿ ಕೈಗೆ ಸಿಕ್ಕ ಪಾತ್ರೆ, ಪಗಡೆ, ಗ್ಯಾಸ್, ಸಿಲಿಂಡರ್, ಬಟ್ಟೆ-ಬರೆಗಳನ್ನು ಕಟ್ಟಿಕೊಂಡು ಮನೆ ಬಿಟ್ಟು ಬಂದಿದ್ದಾರೆ. ಜಿಲ್ಲಾಡಳಿತ ಮುನ್ಸಿಪಲ್ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರದಲ್ಲಿ ಸದ್ಯ ಆಶ್ರಯ ಪಡೆದಿದ್ದಾರೆ.

ಸಮಸ್ಯೆ ಆಲಿಸಿದ ಡಿಸಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಂತೆ ಸಂತ್ರಸ್ತ ಮಹಿಳೆಯೊಬ್ಬರು ಅವರ ಕಾಲಿಗೆ ಬಿದ್ದು ತಮ್ಮ ಅಳಲು ತೋಡಿಕೊಂಡರು. ಪ್ರತಿ ವರ್ಷ ಈ ಗೋಳು ನಮಗೆ ತಪ್ಪಿದ್ದಲ್ಲ. ದಯವಿಟ್ಟು ನಮಗೆ ಶಾಶ್ವತ ಪರಿಹಾರ ಮಾಡಿ ಕೊಡಿ, ನಿಮ್ಮ ಕಾಲಿಗೆ ಬಿಳುತ್ತೇನೆ ಎಂದು ಅಂಗಲಾಚಿದರು. ಆಗ ಆ ಮಹಿಳೆಯನ್ನು ಜಿಲ್ಲಾಧಿಕಾರಿ ಸಂತೈಸಲು ಯತ್ನಿಸಿದರು.

belagavi Gokak Flood DC Visit shelter home People demand for permanent solution

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ, ಮನೆಗೆ ನೀರು ನುಗ್ಗಿರುವ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಿದ್ದೇವೆ. ಈಗ ನಾನು ಜಿ.ಪಂ.ಸಿಇಒ, ತಹಶೀಲ್ದಾರ್ ಅವರ ಜೊತೆಗೆ ಇಲ್ಲಿಗೆ ಭೇಟಿ ನೀಡಿದ್ದೇನೆ. ನಿರಾಶ್ರಿತರು ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ಕಾಳಜಿ ಕೇಂದ್ರದಲ್ಲಿ 200 ಕುಟುಂಬಗಳನ್ನು ಸೇರಿಸಲಾಗಿದ್ದು, ಇದರಲ್ಲಿ ಇಬ್ಬರು ಗರ್ಭಿಣಿಯರು, ಮೂವರು ಬಾಣಂತಿಯರು ಇದ್ದರು. ಅವರನ್ನು ಗೋಕಾಕ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 12 ಚಿಕ್ಕಮಕ್ಕಳಿಗೆ ತೊಂದರೆ ಆಗದಂತೆ ಪ್ರತ್ಯೇಕ ವ್ಯವಸ್ಥೆ ನೀಡಲಾಗಿದೆ. ಅತ್ಯಂತ ಸೂಕ್ಷ್ಮತೆಯಿಂದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ಸಕಲ ವ್ಯವಸ್ಥೆ: ಊಟ, ವಸತಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮಹಿಳೆಯರ ಖಾಸಗೀತನಕ್ಕೆ ಧಕ್ಕೆ ಆಗದಂತೆ ಎಲ್ಲ ರೀತಿ ಉತ್ತಮ ವ್ಯವಸ್ಥೆ ಮಾಡಿದ್ದೇವೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಇಂದು ಬೆಳಿಗ್ಗೆ ಮಾತನಾಡಿ ಮಾಹಿತಿ ನೀಡಿದ್ದೇನೆ. ಅವರು ಇಲ್ಲಿಗೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇಲ್ಲಿನ ಶಾಸಕರ ಜೊತೆಗೆ ಚರ್ಚಿಸಿ ಪ್ರಯತ್ನಿಸಲಾಗುವುದು ಎಂದು ಮೊಹಮ್ಮದ್ ರೋಷನ್ ತಿಳಿಸಿದರು.

belagavi Gokak Flood DC Visit shelter home People demand for permanent solution

ಇಲ್ಲಿನ ಸಂತ್ರಸ್ತರ ಪೈಕಿ ಬಹುತೇಕರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಹಾಗಾಗಿ, ಮನೆ ಮಾಲೀಕರಿಗೆ ಪರಿಹಾರ ತಲುಪುತ್ತದೆ. ಆದರೆ, ನಿಜವಾದ ಸಂತ್ರಸ್ತರಿಗೆ ಪರಿಹಾರ ನೀಡಲ್ಲ ಎಂಬ ಆರೋಪಕ್ಕೆ ನಿಯಮ ಆ ರೀತಿ ಇದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತರುತ್ತೇನೆ. ಎಸ್.ಡಿ.ಆರ್‌.ಎಫ್, ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂತ್ರಸ್ತರಿಗೂ ಪರಿಹಾರ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಪ್ರವಾಹ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಸಮಸ್ಯೆ ಆಗದಂತೆ ಮೇವು ಬ್ಯಾಂಕ್ ಸ್ಥಾಪಿಸುವ ಬಗ್ಗೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದ್ದೇವೆ. ಹೋದ ವರ್ಷ ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಸಮಸ್ಯೆ ಆಗಿತ್ತು. ಈ ವರ್ಷ ಎಲ್ಲಿಯೂ ಮೇವಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ