ಬೆಳಗಾವಿ, ಆಗಸ್ಟ್ 19: ಮಹಾರಾಷ್ಟ್ರದ (Maharashtra) ಪಶ್ಚಿಮ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ (Belagavi) ಜಿಲ್ಲೆಯಲ್ಲಿ ಹರಿಯುವ ಪಂಚನದಿಗಳಾದ ಕೃಷ್ಣಾ (Krishna River), ಘಟಪ್ರಭಾ, ಮಲಪ್ರಭಾ, ವೇದಗಂಗಾ, ಮತ್ತು ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನಲ್ಲಿನ 8 ಕೆಳ ಹಂತದ ಸೇತುವೆಗಳು ಒಂದೇ ರಾತ್ರಿ ಜಲಾವೃತಗೊಂಡಿವೆ. ಇದರಿಂದ ತಾಲೂಕಿನಲ್ಲಿ 18 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನರು ಪರ್ಯಾಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಬಾರವಾಡ-ಕುನ್ನೂರ ಸೇತುವೆ ಜಲಾವೃತಗೊಂಡಿದೆ. ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಕ್ಸಂಬಾ-ದತ್ತವಾಡ, ಕಲ್ಲೋಳ-ಯಡೂರ ಮತ್ತು ಬಾವನಸೌದತ್ತಿ-ಮಾಂಜರಿ ಸೇತುವೆ ಮುಳುಗಡೆಯಾಗಿದೆ.
ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ ಸೇತುವೆ ಎರಡೇ ತಿಂಗಳಲ್ಲಿ ಆರನೇ ಬಾರಿಗೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ದೂದಗಂಗಾ ನದಿಗೆ ಮಹಿಳೆಯರು ಪೂಜೆ ಸಲ್ಲಿಸಿ, ರೈತರಿಗೆ, ಜನರಿಗೆ ಒಳ್ಳೆಯದನ್ನು ಮಾಡುಅಂತ ಬೇಡಿಕೊಂಡರು.
Laxmi News 24×7