ನೆಲಮಂಗಲ : ಇಲ್ಲಿಯ ಅರಳಸಂದ್ರ ಗ್ರಾಮದಲ್ಲಿ ಹಳ್ಳಿಕಾರ್ ತಳಿಯ ಎರಡು ಹೋರಿಗಳ ಕತ್ತು ಕೊಯ್ದು ನಡುರಸ್ತೆಯಲ್ಲಿ ಎಸೆದ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಎಂಎಸ್ ಪಾಳ್ಯದ ನಿವಾಸಿ ಇಮ್ರಾನ್ (30), ಮಹಮ್ಮದ್ ಸಾಬ್ ಪಾಳ್ಯದ ನಿವಾಸಿ ಸಯ್ಯದ್ ನವಾಜ್ (35), ಶ್ರೀನಿಧಿ ಬಡಾವಣೆಯ ನಿವಾಸಿ ವೆಂಕಟೇಶ್ ಅಲಿಯಾಸ್ ಮಹಮ್ಮದ್ ಶುಯಾಬ್ (20) ಬಂಧಿತ ಆರೋಪಿಗಳು. ಬಂಧನದ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಘಟನೆ ಹಿನ್ನೆಲೆ: ಕಳೆದ ಆ.10ರಂದು ತಾಲೂಕಿನ ಅರಳಸಂದ್ರ ಗ್ರಾಮದ ಕುಮದ್ವತಿ ನದಿಗೆ ಅಡ್ಡವಾಗಿ ಕಟ್ಟಿರುವ ಸೇತುವೆ ಮೇಲೆ ಎರಡು ಹಳ್ಳಿಕಾರ್ ತಳಿಯ ಹಸುಗಳ ಕತ್ತು ಕೊಯ್ದು ಎಸೆಯಲಾಗಿತ್ತು. ನಾಟಿ ಹಸುಗಳ ಮೇಲಿನ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಆರೋಪಿಗಳು ಆಗಸ್ಟ್ 10ರ ಮಧ್ಯರಾತ್ರಿ ಟೆಂಪೋ ಮೂಲಕ ಅಕ್ರಮವಾಗಿ ದನಗಳನ್ನು ಬೆಂಗಳೂರಿನಿಂದ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಸಾಗಿಸುವ ವೇಳೆ ಒಂದು ಹೋರಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದರೆ, ಮತ್ತೊಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಇವು ಮಾಂಸಕ್ಕೆ ಯೋಗ್ಯವಲ್ಲ ಎಂದು ತಿಳಿದ ಬಂಧಿತ ಆರೋಪಿಗಳು, ಅವುಗಳ ಕತ್ತು ಕೊಯ್ದು ಅಲ್ಲಿಯೇ ಎಸೆದು ಪರಾರಿಯಾಗಿದ್ದರು.
ಈ ಘಟನೆ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಸದನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಇದನ್ನು ಖಂಡಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಕೆ. ಬಾಬಾ ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವಂತೆ ನೆಲಮಂಗಲ ಗ್ರಾಮಾಂತರ ಇನ್ಸ್ಪೆಕ್ಟರ್ ನರೇಂದ್ರಬಾಬು ಅವರಿಗೆ ಸೂಚನೆ ನೀಡಿದ್ದರು. ಟೆಂಪೋ ನಂಬರ್ ಪತ್ತೆ ಮಾಡಿದ ಪೊಲೀಸರ ತಂಡ, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Laxmi News 24×7