ಗದಗ, ಆಗಸ್ಟ್ 18: ಈ ಆಧುನಿಕ ಕಾಲದಲ್ಲಿ ಅನೇಕ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದು ಕಷ್ಟ. ಹೀಗಾಗಿ ‘ಪ್ರಭುವಿನೆಡೆಗೆ ಪ್ರಭುತ್ವ’ (Prabhuvindege Prabhutva) ಎನ್ನುವ ಪರಿಕಲ್ಪನೆ ತರಲಾಗಿದೆ. ಆ ಮೂಲಕ ವಿದ್ಯುನ್ಮಾನ ಯಂತ್ರದ ಮುಂದೆ ಸಮಸ್ಯೆ ಹೇಳಿಕೊಂಡರೆ ಸಾಕು, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಾರೆ. ಗದಗ (Gadag) ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರಂಭಗೊಳ್ಳುತ್ತಿದ್ದು, ಈ ರೀತಿಯ ಪರಿಕಲ್ಪನೆ ಇಡೀ ದೇಶದಲ್ಲೇ ಪ್ರಥಮ ಎಂದು ಜಿಲ್ಲಾಡಳಿತ ಹೇಳಿದೆ
‘ಪ್ರಭುವಿನೆಡೆಗೆ ಪ್ರಭುತ್ವ’ ಪರಿಕಲ್ಪನೆ ಇಡೀ ದೇಶದಲ್ಲಿ ಮೊದಲ ಭಾರಿಗೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಆರಂಭ ಮಾಡಲಾಗಿದೆ. ಅಂದಹಾಗೇ ಈ ಹಿಂದೆ ರಾಜ್ಯ ಮಹಾರಾಜರ ಕಾಲದಲ್ಲಿ ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಗಂಟೆಯನ್ನು ಬಾರಿಸುತ್ತಿದ್ದರು. ಆದರೆ ಆಧುನಿಕ ಕಾಲಕ್ಕೆ ತಕ್ಕಂತೆ ಬದಲಾಗಿ ವಿದ್ಯುನ್ಮಾನ ಯಂತ್ರವನ್ನು ಅಳವಡಿಕೆ ಮಾಡಲಾಗಿದೆ.
ಜನ ಬಳಕೆ ಹೇಗೆ?
ಈ ಯಂತ್ರದಲ್ಲಿನ ಬಟನ್ ಒತ್ತುವ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಜನರು ಬಟನ್ ಒತ್ತಿದ ಕೂಡಲೇ ಅದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂಗೆ ಕಾಲ್ ಹೋಗುತ್ತದೆ. ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಾರೆ. ನಂತರ ಸಂಬಂಧಿಸಿದ ಇಲಾಖೆಗೆ ಅದರ ಮಾಹಿತಿ ನೀಡುತ್ತಾರೆ. ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಹೀಗಾಗಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುವುದರಿಂದ ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಸಿಗುವ ನಂಬಿಕೆಯಿದೆ. ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ‘ಪ್ರಭುವಿನೆಡೆಗೆ ಪ್ರಭುತ್ವ’ ಪರಿಕಲ್ಪನೆ ಜಾರಿ ಮಾಡಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
Laxmi News 24×7