ಮೈಸೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ)ಗೆ 23.16 ಲಕ್ಷ ರೂ. ವಂಚಿಸಲಾಗಿದೆ.
ಈ ಕುರಿತು ಬ್ಯಾಂಕ್ ಮ್ಯಾನೇಜರ್ ಪ್ರತಿಭಾ ಅವರು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸಂಬಳ ಸೇರಿದಂತೆ ಇತರೆ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಬ್ಯಾಂಕ್ನಿಂದ ಮೂವರು ಸಾಲ ಪಡೆದಿದ್ದರು. ದಾಖಲಾತಿ ಪರಿಶೀಲನೆಯ ಸಂದರ್ಭದಲ್ಲಿ ದಾಖಲೆಗಳು ನಕಲಿ ಎಂದು ಗೊತ್ತಾಗಿದೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ. ವಂಚನೆಯ ವಿವರ ಹೀಗಿದೆ.
- ಕೆ.ಆರ್.ನಗರದ ಮೇಘ ಎಂಬ ಮಹಿಳೆ ತಾನು ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಮಾಸಿಕ 34,700 ರೂ ವೇತನ ಪಡೆಯುತ್ತಿರುವುದಾಗಿ ನಕಲಿ ದಾಖಲೆಗಳೊಂದಿಗೆ ಇತರೆ ನಕಲಿ ದಾಖಲೆ ಸಲ್ಲಿಸಿ 9.16 ಲಕ್ಷ ರೂ. ಸಾಲ ಪಡೆದಿದ್ದರು.
- ಎರಡನೇ ಪ್ರಕರಣದಲ್ಲಿ ಕ್ಯಾತಮಾರನಹಳ್ಳಿಯ ರವಿಕುಮಾರ್ ಎಂಬಾತ ತಾನು ಖಾಸಗಿ ಕಂಪನಿಯಲ್ಲಿ ಟೀಮ್ ಲೀಡರ್ ಎಂದು 37,800 ರೂ. ಮಾಸಿಕ ಸಂಬಳ ಬರುತ್ತಿರುವುದಾಗಿ ನಕಲಿ ಸಂಬಳ ದಾಖಲಾತಿ ಹಾಗು ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ಸಲ್ಲಿಸಿ 8 ಲಕ್ಷ ರೂ ಸಾಲ ಪಡೆದಿದ್ದರು.
- ಮೂರನೇ ಪ್ರಕರಣದಲ್ಲಿ ರಾಘವೇಂದ್ರ ನಗರದ ಪಿ.ದೀಪಕ್ ಎಂಬವರು ತಾನು ಖಾಸಗಿ ಕಂಪನಿಯಲ್ಲಿ ಸೇಲ್ಸ್ ಆಫೀಸರ್ ಎಂದು ಮಾಸಿಕ 22,817 ರೂ. ವೇತನ ಬರುತ್ತಿರುವುದಾಗಿ ಹೇಳಿ ಬ್ಯಾಂಕ್ ವಹಿವಾಟಿನ ನಕಲಿ ದಾಖಲೆ ಸೃಷ್ಟಿಸಿ 6 ಲಕ್ಷ ರೂ ಸಾಲ ಪಡೆದಿದ್ದರು.
ಮತ್ತೊಂದು ವಂಚನೆ ಪ್ರಕರಣ: ವಾರ್ಷಿಕ ಕೋಟಿ ರೂ. ವಹಿವಾಟು ನಡೆಸಿದರೆ ಸಾಲ ಸಿಗುತ್ತದೆ ಎಂದು ಉದ್ಯಮಿಯನ್ನು ನಂಬಿಸಿದ ವಂಚಕರು, ಆತನ ಬ್ಯಾಂಕ್ ಖಾತೆಯಲ್ಲಿದ್ದ 57 ಲಕ್ಷ ರೂ. ದೋಚಿದ್ದಾರೆ. ಬನ್ನಿಮಂಟಪದ ನಿವಾಸಿ ಹಾಗು ಉದ್ಯಮಿ ಬಿಲಾಲ್ ಎಂಬವರು ಹಣ ಕಳೆದುಕೊಂಡಿದ್ದಾರೆ.
ಈ ಉದ್ಯಮಿ ತಮಗೆ ಸಾಲಬೇಕು ಎಂದು ಇನ್ಸ್ಟಾಗ್ರಾಂನಲ್ಲಿ ಬಂದ ಕಂಪನಿಯ ಮಾಹಿತಿ ನಂಬಿ ವಂಚಕನನ್ನು ಸಂಪರ್ಕಿಸಿದ್ದಾರೆ. ಆತ ಸಾಲ ಸಿಗಬೇಕಾದರೆ ಕೋಟಿ ರೂಪಾಯಿ ವಹಿವಾಟು ನಡೆಸಬೇಕು ಎಂದು ಹೇಳಿ ಉದ್ಯಮಿಯ ಬ್ಯಾಂಕಿನ ವಹಿವಾಟಿನ ಕುರಿತು ಮಾಹಿತಿ ಪಡೆಯುವ ನೆಪದಲ್ಲಿ ಒಟಿಪಿ ಪಡೆದು ಬ್ಯಾಂಕ್ ಖಾತೆಯಿಂದ 57 ಲಕ್ಷ ರೂ. ದೋಚಿದ್ದಾನೆ ಎಂದು ಉದ್ಯಮಿ ದೂರು ನೀಡಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7