ಹಾವೇರಿ: ದೇಶವೆಲ್ಲಾ 79ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧವಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣಕಳೆದುಕೊಂಡವರ ತ್ಯಾಗಬಲಿದಾನಗಳನ್ನು ಕೊಂಡಾಡಲಾಗುತ್ತಿದೆ. ಪುರಾತನ ಭಾರತದಿಂದ ಹಿಡಿದು ಆಧುನಿಕ ಭಾರತ ನಡೆದುಬಂದ ಹೆಜ್ಜೆಗಳನ್ನು ಮೆಲುಕು ಹಾಕಲಾಗುತ್ತಿದೆ.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಜನರು ಪ್ರಾಣತೆತ್ತಿದ್ದಾರೆ. ಲಕ್ಷಾಂತರ ಜನ ಮನೆಮಠ ಕಳೆದುಕೊಂಡಿದ್ದಾರೆ. ಸಹಸ್ರಾರು ಜನ ಅಂಗಾಂಗ ಕಳೆದುಕೊಂಡಿದ್ದಾರೆ. ಆದರೆ ಹಲವು ಹೋರಾಟಗಾರರ ಚಿತ್ರಗಳು ಕಣ್ಮುಂದೆ ಬರುವುದಿಲ್ಲಾ. ಇದಕ್ಕೆ ಕಾರಣ ಕಲಾವಿದರು ಉಳಿದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಿಡಿಸುವುದರಲ್ಲಿ ಆಸಕ್ತಿ ವಹಿಸದಿರುವುದೇ ಕಾರಣ ಎನ್ನುತ್ತಾರೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕುಮಾರಪಟ್ಟಣಂನ ಚಿತ್ರಕಲಾವಿದ ಗೋವಿಂದ ಜೆ ಮೆಹೆಂದಳೆ.
ಹಾವಭಾವ ಮೂಲಕ ರಚನೆ: ಈ ಹಿನ್ನೆಲೆಯಲ್ಲಿ ಚಿತ್ರ ಕಲಾವಿದ ಗೋವಿಂದ ಮೆಹೆಂದಳೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಬಿಡಿಸಲು ಮುಂದಾಗಿದ್ದಾರೆ. 2007 ರಿಂದ ಈ ಕಾರ್ಯಕ್ಕೆ ಮುಂದಾಗಿರುವ ಗೋವಿಂದ ಮೆಹೆಂದಳೆ ಸುಮಾರು 350 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಬಿಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಹೋಗಿ ಅವರು ಹಾವಭಾವಗಳನ್ನು ತಿಳಿದುಕೊಂಡು ಸಂಬಂಧಿಕರ ಜೊತೆ ಚರ್ಚಿಸಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ರಚಿಸಿದ್ದಾರೆ.
ಖಾದಿ ಬಟ್ಟೆಯಲ್ಲಿ ಅರಳಿದ ಕುಂಚ: ಎಲ್ಲ ಚಿತ್ರಗಳನ್ನು ಖಾದಿ ಬಟ್ಟೆಯಲ್ಲಿ ಚಿತ್ರಿಸಿರುವ ಈ ಕಲಾವಿದನ ಕುಂಚ ಇನ್ಮುಂದೆ ಚಿತ್ರಕಲಾವಿದರ ಚಿತ್ರ ಬರೆಯಲು ಉತ್ಸುಕವಾಗಿದೆ. ಈ ರೀತಿಯ ಚಿತ್ರಗಳನ್ನು ಬಿಡಿಸುವುದು ಅಷ್ಟೇ ಅಲ್ಲ, ಅವುಗಳನ್ನು ಶಾಲಾ ಕಾಲೇಜುಗಳಲ್ಲಿ ಭಾವಚಿತ್ರಗಳ ಪ್ರದರ್ಶನವನ್ನು ಸಹ ಇವರು ನಡೆಸಿದ್ದಾರೆ. ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ ಸುಮಾರು 1,287 ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಗಳ ಮೂಲಕ ವೀಕ್ಷಕರಿಗೆ ಪರಿಚಯಿಸಿದ್ದಾರೆ.
“ಇವತ್ತಿನ ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಸಿಗುವುದು ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ಮಾತ್ರ. ಇವರ ಜೊತೆ ಹೋರಾಟ ಮಾಡಿ ಪ್ರಾಣತೆತ್ತ ಲಕ್ಷಾಂತರ ಸ್ವಾತಂತ್ರ ಹೋರಾಟಗಾರರು ಇಂದಿನ ಪೀಳಿಗೆಗೆ ಗೊತ್ತೆ ಇಲ್ಲಾ. ಮುಂದಿನ ಪೀಳಿಗೆಯವರಿಗೆ ಸ್ವಾತಂತ್ರ ಹೋರಾಟಗಾರರ ನೆನಪು ಉಳಿಸಲು ನಾನು ಮುಂದಾಗಿದ್ದೇನೆ. ಅವುಗಳ ಪ್ರದರ್ಶನ ಮಾಡುವ ಮೂಲಕ ಸಾಮಾನ್ಯ ಜನರಿಗೆ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಪರಿಚಯಸಲು ಮುಂದಾಗಿದ್ದೇನೆ. ಬೆರಳೆಣಿಕಯಷ್ಟು ಭಾವಚಿತ್ರವಿರುವ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡುಪ್ರಚಾರ ಸಿಗದೆ ಎಲೆಮರೆಯ ಕಾಯಿಯಂತೆ ಅವರು ಉಳಿದುಕೊಳ್ಳಬಾರದು ಎಂದು ಈ ರೀತಿಯ ಭಾವಚಿತ್ರ ರಚಿಸಲು ಮುಂದಾಗಿದ್ದೇನೆ”. ಎನ್ನುತ್ತಾರೆ ಗೋವಿಂದ.

ಕಲೆಗೆ ಒದಗಿದ ವಿಶ್ವಪ್ರಶಸ್ತಿಯ ಗರಿ:ಸ್ವಾತಂತ್ರ್ಯ ಹೋರಾಟಗಾರರ ಮೂನ್ನೂರೈವತ್ತು ಭಾವಚಿತ್ರ ರಚಿಸುವುದಲ್ಲದೆ ಗೋವಿಂದ ಮೆಹೆಂದಳೆ ಸ್ವಾತಂತ್ರ ಹೋರಾಟಗಾರರ ಜೀವನ ಚರಿತ್ರೆಯನ್ನು ಸಂಗ್ರಹಿಸಿದ್ದಾರೆ. ಅವುಗಳ ಬಿತ್ತಿಚಿತ್ರಗಳನ್ನು ಸಹ ತಯಾರಿಸಿ ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಈ ಸ್ವಾತಂತ್ರ ಹೋರಾಟಗಾರರ ಪುಸ್ತಕ ಸಹ ಬರೆದಿದ್ದಾರೆ. ಇವರ ಈ ಸಾಹಸಕ್ಕೆ ವಿಶ್ವಪ್ರಶಸ್ತಿಯ ಗರಿ ಸಹ ಸಿಕ್ಕಿದೆ. ಇವರ ಈ ಭಾವಚಿತ್ರಗಳ ಪ್ರದರ್ಶನಕ್ಕೆ ಶಾಲಾ ಕಾಲೇಜುಗಳು ಮುಂದೆ ಬರುತ್ತಿವೆ. ಇಂತಹ ಚಿತ್ರಗಳನ್ನು ನಾವು ನೋಡಿರಲಿಲ್ಲಾ ಎನ್ನುತ್ತಾರೆ ವಿದ್ಯಾರ್ಥಿಗಳು.

ವಿದ್ಯಾರ್ಥಿನಿ ಸುಮಾ ಮಾತನಾಡಿ, “ಕೇವಲ ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ನನಗೆ ಪರಿಚಯವಿದ್ದವು. ಗೋವಿಂದ ಮೆಹೆಂದಳೆ ಪ್ರದರ್ಶನ ವೀಕ್ಷಿಸಿದ ನಂತರ ಎಲೆಮರೆಯ ಕಾಯಿಯಂತಿರುವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ನೋಡಿದೆ. ಈ ರೀತಿಯ ಪ್ರದರ್ಶನ ನನಗೆ ಅತ್ಯಮೂಲ್ಯವಾಗಿದೆ. ಇಂದಿನ ಪೀಳಿಗೆಗೆ ಈ ರೀತಿಯ ಪ್ರದರ್ಶನಗಳು ಹೆಚ್ಚು ಅರ್ಥಪೂರ್ಣವಾಗಿವೆ” ಎಂದರು.
ಮೆಹೆಂದಳೆ ಚಿತ್ರಪ್ರದರ್ಶನವಷ್ಟೇ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರ ಸಹ ರಚಿಸಿದ್ದಾರೆ. 2007 ರಿಂದ ಚಿತ್ರರಚನೆಗೆ ಮುಂದಾದ ಇವರು ಪ್ರೌಢಶಾಲೆಯ ಡ್ರಾಯಿಂಗ್ ಟೀಚರ್ ಆಗಿ ಇದೀಗ ನಿವೃತ್ತಿಯಾಗಿದ್ದಾರೆ. ನಿವೃತ್ತಿಯಾಗಿ ಎರಡು ವರ್ಷವಾದರೂ ಸಹ ಇವರ ಚಿತ್ರಪ್ರೇಮ ಮಾತ್ರ ಕಡಿಮೆಯಾಗಿಲ್ಲಾ. ಈಗಲೂ ಒಂದಿಲ್ಲಾ ಒಂದು ಚಿತ್ರ ಬಿಡಿಸುವದಲ್ಲಿ ಗೋವಿಂದ ಮೆಹೆಂದಳೆ ನಿರತರಾಗಿರುತ್ತಾರೆ.ಚಿತ್ರ ಬಿಡಿಸುವುದು ಇಲ್ಲವೇ ಪ್ರದರ್ಶನ ನೀಡುವುದೇ ಇವರ ಕಾಯಕವಾಗಿದೆ. ನಿವೃತ್ತಿಯಾದ ನಂತರ ಚಿತ್ರರಚನೆಗೆ ಪ್ರದರ್ಶನಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಇನ್ನು ಎಲೆಮರೆಯ ಕಾಯಿಯಂತಿರುವ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಅವರ ಭಾವಚಿತ್ರಗಳ ರಚನೆಯಲ್ಲಿ ನಿರತರಾಗಿದ್ದಾರೆ. ಈ ಇಳಿವಯಸ್ಸಿನಲ್ಲಿ ಸಹ ಯುವಕರು ನಾಚಿಸುವಂತೆ ಭಾವಚಿತ್ರ ಬಿಡಿಸುತ್ತಾರೆ.
Laxmi News 24×7