ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ಆದರೆ, ದೇಶದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜವನ್ನು ನೇಯುವ ನೇಕಾರ ಮಹಿಳೆಯರ ಬದುಕು ಮಾತ್ರ ಅತಂತ್ರವಾಗಿದೆ.
ಇಷ್ಟು ವರ್ಷವಾದರೂ ಅವರಿಗೆ ಸರಿಯಾದ ಕೂಲಿ ಸಿಗದೇ ಪರಿದಾಡುವಂತಾಗಿಗೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ನಾಳೆ ಆಗಸ್ಟ್ 15 ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲ ಕ್ಷೇತ್ರಗಳಲ್ಲಿ ಭಾರತ ಈಗ ಮುಂಚೂಣಿಯನ್ನು ಸಾಧಿಸಿದೆ. ನಾಳೆ ದೇಶಾದ್ಯಂತ ತ್ರಿವರ್ಣ ಧ್ವಜವನ್ನು ಹಾರಿಸಿ ಅದಕ್ಕೆ ಅತ್ಯಂತ ಶಿಸ್ತಿನಿಂದ ಗೌರವ ಸಲ್ಲಿಸಲಾಗುತ್ತದೆ.
ಭಾರತದ ಗುರುತನ್ನು ಪ್ರತಿಬಿಂಬಿಸುವ ಕೇಸರಿ, ಬಿಳಿ, ಹಸಿರು ಧ್ವಜವನ್ನು ತಯಾರಿಸುವವರ ಬದುಕು ಮಾತ್ರ ಇನ್ನು ಹಸನಾಗಿಲ್ಲ. ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ,
ಕಳೆದ 21 ವರ್ಷಗಳಿಂದಲೂ ಮಹಿಳೆಯರು ಕೈಮಗ್ಗದ ಮೂಲಕ ರಾಷ್ಟ್ರಧ್ವಜದ ಬಟ್ಟೆಯನ್ನು ನೇಯುತ್ತಿದ್ದಾರೆ. ಆದರೆ, ದೇಶಾಭಿಮಾನದ ಮಾತನಾಡುವ ರಾಜಕಾರಣಿಗಳು, ರಾಷ್ಟ್ರೀಯ ದಿನಾಚರಣೆಗಳನ್ನು ಅದ್ದೂರಿಯಾಗಿ ಆಚರಿಸುವ ನಾಯಕರು ಈ ನೇಕಾರರ ಗೋಳನ್ನು ಕೇಳುತ್ತಿಲ್ಲ.
ಒಂದು ಮೀಟರ್ ರಾಷ್ಟ್ರಧ್ವಜದ ಬಟ್ಟೆ ನೇಯ್ದರೆ ಕೇವಲ 32 ರೂಪಾಯಿ ಕೂಲಿ ಸಿಗುತ್ತದೆ. ದಿನಕ್ಕೆ 6 ಮೀಟರ್ ಬಟ್ಟೆ ನೇಯ್ದರೂ, ಮನೆ ನಡೆಸಲು ಸಾಕಷ್ಟು ಹಣ ಸಿಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಮದುವೆ-ಮುಂಜಿವೆಗಳಂತಹ ಕಾರ್ಯಗಳಿಗೆ ಸಾಲ ಮಾಡುವುದು ಅವರಿಗೆ ಅನಿವಾರ್ಯವಾಗಿದೆ.
ಹಲವು ಬಾರಿ ಮನವಿ ಮಾಡಿದರೂ, ಜನಪ್ರತಿನಿಧಿಗಳು ಇವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಡಿಮೆ ಕೂಲಿಯಿಂದ ಬೇಸತ್ತು ಈಗಾಗಲೇ ಅನೇಕ ಮಹಿಳೆಯರು ಈ ಕೆಲಸವನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಅರಸಿಕೊಂಡು ಹೋಗಿದ್ದಾರೆ. ಇಡೀ ದಿನ ದುಡಿದರೂ,
ಸಿಗುವ ಕೂಲಿ ಅಲ್ಪವಾಗಿದ್ದು, ಇವರ ಬದುಕು ಬರಿ ಕಷ್ಟಗಳಿಂದಲೇ ತುಂಬಿದೆ. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ನೇಕಾರರ ನೆರವಿಗೆ ಧಾವಿಸಬೇಕಿದೆ. ಅವರಿಗೆ ಸಮರ್ಪಕ ಕೂಲಿ ನೀಡಿ, ಅವರ ಕುಟುಂಬಗಳು ಗೌರವಯುತವಾಗಿ ಬದುಕುವಂತೆ ಮಾಡಬೇಕಿದೆ. ದೇಶಾಭಿಮಾನದ ಮಾತನಾಡುವ ಮುಂಚೆ, ದೇಶದ ಹೆಮ್ಮೆಯನ್ನು ನೇಯುವ ಕೈಗಳಿಗೆ ಸರಿಯಾದ ಬೆಲೆ ಸಿಗುವಂತೆ ನೋಡಿಕೊಳ್ಳಬೇಕಿದೆ.
Laxmi News 24×7