ಮಹಿಳೆಯರ ಭದ್ರತೆ–ಧೈರ್ಯ ಬೆಳೆಸುವ ಜಾಗೃತಿ ಕಾರ್ಯ – ಪೊಲೀಸ್
ರಾಜ್ಯದ ಗೃಹ ಸಚಿವರು ಹಾಗೂ ಜಿಲ್ಲಾ ಪೊಲೀಸ್ ಪ್ರಮುಖರ ನಿರ್ದೇಶನದಂತೆ ಸರಕಾರ ಕೈಗೊಂಡ “ಮನೆ-ಮನೆಗೆ ಪೊಲೀಸ್” ಯೋಜನೆ ಅಡಿಯಲ್ಲಿ, ಅಥಣಿ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಹಳ್ಳೂರ ಹಾಗೂ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ಅವರ ನೇತೃತ್ವದಲ್ಲಿ ಐನಾಪುರ ಪಟ್ಟಣದ ಮನೆಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು. ವಿಶೇಷವಾಗಿ ಮಹಿಳೆಯರಲ್ಲಿ ಧೈರ್ಯ ಮತ್ತು ಭದ್ರತೆಯ ಭಾವನೆ ಬೆಳೆಸುವ ಕಾರ್ಯ ಮಾಡಿದರು.
ಬುಧುವಾರ ಸಂಜೆ ಪಟ್ಟಣದ ಹಲವಾರು ಉಮನೆಗಳಿಗೆ ತೆರಳಿ, ಪುರುಷರು ಹಾಗೂ ಮಹಿಳೆಯರಿಗೆ ಈ ಯೋಜನೆಯ ಉದ್ದೇಶ ವಿವರಿಸಿ ನಾವು ನಿಮ್ಮೊಂದಿಗಿದ್ದೇವೆ, ನೀವು ಧೈರ್ಯವಾಗಿರಿ ಎಂದು ಭರವಸೆ ನೀಡಿದರು.
ಅವರು ಎಚ್ಚರಿಕೆ ನೀಡುತ್ತಾ ಹೇಳಿದರು, ಕೆಲವರು ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ದೋಚುವ ಘಟನೆಗಳು ನಡೆದಿವೆ; ಇಂತಹ ಮೋಸಕ್ಕೆ ಒಳಗಾಗಬೇಡಿ. ಮತ್ತೂ ಕೆಲವರು ಹಣವನ್ನು ದ್ವಿಗುಣ ಮಾಡುತ್ತೇವೆ ಎಂಬ ವಂಚನೆ ಮಾತಿನಲ್ಲಿ ಹಣ ಸಂಗ್ರಹಿಸುತ್ತಾರೆ.
ಮೊದಲು ಆ ಸಂಸ್ಥೆಯ ನೈಜತೆ ಪರಿಶೀಲಿಸಿ, ನಂತರವೇ ವ್ಯವಹರಿಸಿ.
ಮನೆಯ ಸೊಸೆಯಂದರಿಗೆ ದೌರ್ಜನ್ಯವಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಮನವಿ ಮಾಡಿದರು. ಕಳ್ಳರ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಸಂಪರ್ಕಿಸಬೇಕು ಎಂದು ತಿಳಿಸಿದರು. ಯಾವುದೇ ತುರ್ತು ಅನಾಹುತ ಉಂಟಾದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ ೧೧೨ ಅನ್ನು ಕರೆಮಾಡುವಂತೆ,
ಹಾಗೂ ನಕಲಿ ಆನ್ಲೈನ್ ಕರೆಗಳಿಗೆ ಪ್ರತಿಕ್ರಿಯಿಸದೆ, ಸೈಬರ್ ಸಹಾಯವಾಣಿ ೧೯೩೦ ಗೆ ಮಾಹಿತಿ ನೀಡುವಂತೆ ಎಚ್ಚರಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಅಪರಾಧ ವಿಭಾಗದ ಪಿಎಸ್ಐ ಎಂ.ಬಿ. ಆಳಂದ, ಪೊಲೀಸರು ವಿಜಯ ನರಗಟ್ಟಿ ಮತ್ತು ಸುರೇಶ ನಂದಿವಾಲೆ ಭಾಗವಹಿಸಿದ್ದರು.
Laxmi News 24×7