ಬೆಳಗಾವಿ: ಗೋಕಾಕ್ ಉಗ್ರಾಣದಲ್ಲಿ 98 ಲಕ್ಷ ರೂಪಾಯಿ ಮೌಲ್ಯದ ಔಷಧ ಅವಧಿ ಮೀರಿದೆ. ಜನವರಿಯಿಂದ ಈವರೆಗೆ 6 ಲಕ್ಷ ರೂ. ಮೌಲ್ಯದ ಔಷಧ ಅವಧಿ ಮೀರಿದ್ದು ಕಂಡು ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಂದ ಐದಾರು ತಾಲೂಕುಗಳ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಆಗುತ್ತದೆ. ಆ ಔಷಧ ಉಪಯೋಗ ಮಾಡಿಲ್ಲ. ಜನರ ದುಡ್ಡು ಈ ರೀತಿಯಲ್ಲಿ ಪೋಲು ಆಗಲು ಬಿಡಬೇಕಾ..? ನಾವು ಈ ನಿಟ್ಟಿನಲ್ಲಿ ಕೇಸ್ ದಾಖಲು ಮಾಡಿದ್ದೇವೆ. ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ, ಉಗ್ರಾಣದ ಉಸ್ತುವಾರಿಯನ್ನು ಭಾಗಿದಾರರನ್ನಾಗಿ ಮಾಡಿ ನೋಟಿಸ್ ಕೊಟ್ಟು ಕಾರಣ ಕೇಳುತ್ತೇವೆ. ಅವರ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇನ್ನು ಔಷಧ ಖರೀದಿಸುವ ಸಂದರ್ಭದಲ್ಲೇ ಅವಧಿ ಅರ್ಧದಷ್ಟು ಮುಗಿದಿರುತ್ತದೆ. ಅವು ಆಯಾ ಆಸ್ಪತ್ರೆಗೆ ಹಂಚಿಕೆ ಆಗುವಷ್ಟರಲ್ಲಿ ಅವಧಿ ಮೀರಿರುತ್ತದೆ. ಹಾಗಾಗಿ, ಇದನ್ನೂ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ ಎಲ್ಲಾ ಔಷಧಗಳ ಉಗ್ರಾಣದಲ್ಲಿ ತನಿಖೆ ನಡೆಸುತ್ತೇವೆ ಎಂದರು.
ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಪರಿಶೀಲನೆ ಮಾಡಿದ್ದೇವೆ. ದೂರು ಬಂದಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದೇವೆ. ನಾವು ಬರುವ ಮಾಹಿತಿ ಹಿನ್ನೆಲೆಯಲ್ಲಿ ಕೆಲವರು ಎಚ್ಚರ ವಹಿಸಿ ತಮ್ಮ ಕೆಲಸವನ್ನು ನಿಖರವಾಗಿ ಮಾಡಿಕೊಂಡಿದ್ದಾರೆ. ಆಸ್ಪತ್ರೆ, ಪಾಲಿಕೆ, ನಗರಸಭೆ, ತಹಶೀಲ್ದಾರ್, ಭೂಮಾಪನಾ ಇಲಾಖೆ, ಅಬಕಾರಿ, ಸ್ಮಾರ್ಟ್ ಸಿಟಿ ಕಚೇರಿಗೆ ಭೇಟಿ ಕೊಟ್ಟಿದ್ದೇವೆ. ಬೆಳಗಾವಿ ಮಾದರಿ ಜಿಲ್ಲೆ ಮಾಡಬೇಕು. ಭ್ರಷ್ಟಾಚಾರ ಹೊಡೆದು ಓಡಿಸಬೇಕು. ಪಾರದರ್ಶಕ ಆಡಳಿತ ನೀಡುವ ಗುರಿಯನ್ನು ಹೊಂದಿದ್ದೇವೆ. ಇನ್ನು ಬೆಳಗಾವಿ ಪ್ರವಾಸ ಮುಗಿದಿದ್ದು, ಮುಂದೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.
Laxmi News 24×7