ಉಡುಪಿ: ಸಾಮಾನ್ಯವಾಗಿ ನಾಗಾರಾಧನೆಯಲ್ಲಿ ತೊಡಗುವವರು ಬಹುತೇಕ ಹಿಂದೂಗಳು ಮಾತ್ರ. ಅಲ್ಲೊಂದು ಇಲ್ಲೊಂದು ಇದಕ್ಕೆ ಅಪವಾದ ಇರುವುದನ್ನು ನಾವು ಕಾಣುತ್ತೇವೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ ಎಂಬಲ್ಲಿಯ ಅಮೀನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ಮೂವರು ಮುಸ್ಲಿಂ ಬಾಂಧವರು ನಾಗಸ್ವರ ನುಡಿಸುತ್ತಿರುವುದು ವಿಶೇಷವಾಗಿದೆ. ತಲೆತಲಾಂತರಗಳಿಂದ ಈ ಮುಸ್ಲಿಂ ಸಮುದಾಯದ ಜನರು ಲಯಬದ್ಧವಾದ ನಾಗಸ್ವರವನ್ನು ನುಡಿಸುತ್ತಾ ಬಂದಿದ್ದಾರೆ. ಇಲ್ಲಿನ ಮೂವರು ಮುಸ್ಲಿಮರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಈ ನಾಗಸ್ವರ ಪೂಜೆ ನಡೆಸುತ್ತಾ ಬರುವ ಮೂಲಕ ಕರಾವಳಿಯ ನಾಗಾರಾಧನೆಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದದ ಎಳೆಯೊಂದು ಬೆಸೆದುಕೊಂಡಿದೆ.
ನಾಗರ ಪಂಚಮಿಯಂದು ನಾಗದೇವತೆಗೆ ತನು ಎರೆಯುವುದು, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮ ನಡೆಸಲಾಗುವುದು. ನಾಗ ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷ ಬಲಿ, ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆಸಲಾಗುವುದು. ಬಹುತೇಕ ಹಿಂದೂಗಳೇ ಅನುಸರಿಸುವ ನಾಗಾರಾಧನೆಯಲ್ಲಿ ಮುಸ್ಲಿಂ ಕುಟುಂಬವೊಂದು ಹಲವು ವರ್ಷಗಳಿಂದ ಭಾಗಿಯಾಗಿದೆ. ಈ ಆರಾಧನೆಯಲ್ಲಿ ಮುಸ್ಲಿಂ ಕುಟುಂಬ ನಾಗಸ್ವರ ನುಡಿಸುವ ಸೌಹಾರ್ದತೆಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಬ್ದುಲ್ ರಜಾಕ್, ಕಳೆದ ನಾನು 35 ವರ್ಷಗಳಿಂದ ನಾಗಸ್ವರ ನುಡಿಸುತ್ತಾ ಬಂದಿದ್ದು, ತಮ್ಮ ಪೂರ್ವಜರು ಈ ಕಾಯಕದಲ್ಲಿ ತೊಡಗಿದ್ದರು. ಕಾಪು ಜನಾರ್ದನ ದೇವಸ್ಥಾನದಲ್ಲೂ ನಾಗಸ್ವರ ನುಡಿಸುವುದಾಗಿ ತಿಳಿಸಿದ್ದಾರೆ.
ತೆಂಕ ಎರ್ಮಾಳ್ ಮೂಲಸ್ಥಾನದ ಅಧ್ಯಕ್ಷ ಕೆಸಿ ಅಮೀನ್ ಮಾತನಾಡಿ, ನಾಗರಪಂಚಮಿ ಹಬ್ಬದ ಹಿನ್ನೆಲೆ ಇಂದು ಅಬ್ದುಲ್ ರಝಾಕ್ ಮತ್ತವರ ಇಬ್ಬರು ಸಂಗಡಿಗರು ನಾಗಸ್ವರ ನುಡಿಸಿದ್ದಾರೆ. ಇವರು ತಲೆತಲಾಂತರಗಳಿಂದ ನಾಗಸ್ವರ ವಾದನ ಮಾಡುತ್ತಾ ಬಂದಿದ್ದಾರೆ. ಮುಸ್ಲಿಂ ಸಮುದಾಯದವರಾಗಿದ್ದರೂ ನಮ್ಮ ಮೂಲಸ್ಥಾನದ ಹಲವು ಧಾರ್ಮಿಕ ಕಾರ್ಯಗಳಿಗೆ ನಾಗಸ್ವರ ನುಡಿಸುತ್ತಿದ್ದಾರೆ. ಈ ಮೂಲಕ ನಮ್ಮ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಇವರ ಪಾತ್ರವೂ ಇದೆ ಎಂದರು.
ಭಕ್ತ ಗಣೇಶ್ ರಾಜ್ ಸರಳೆಬೆಟ್ಟು ಮಾತನಾಡಿ, ಇಂದು ಪೂಜೆಗೆ ಹೋದಾಗ ಅಲ್ಲಿ ಸುಶ್ರಾವ್ಯವಾಗಿ ನಾಗಸ್ವರ ನುಡಿಸುತ್ತಾ ಇದ್ದ ಹಿನ್ನೆಲೆ ಅವರನ್ನು ಮಾತನಾಡಿಸಿದಾಗ ಅವರ ಹೆಸರು ಕೇಳಿ ಅಚ್ಚರಿಯಾಯಿತು. ಅವರು ನಾಗಸ್ವರ ನುಡಿಸುವ ಮೂಲಕ ಸೌಹಾರ್ದತೆಯನ್ನು ಬೆಸೆಯುವ ಕೆಲಸದಲ್ಲಿರುವುದು ಸಂತಸ ತಂದಿತು. ಅವರು ತಲೆತಲಾಂತರಗಳಿಂದಲೂ ಈ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ ಎಂದು ಕೇಳಿ ನನಗೆ ಬಹಳ ಖುಷಿಯಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
Laxmi News 24×7