Breaking News

ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಜಿಎಸ್​ಟಿ ​ನೋಟಿಸ್​: QR ಕೋಡ್ ಜಾಗದಲ್ಲಿ Cash Only ಬೋರ್ಡ್​ ಪ್ರತ್ಯಕ್ಷ

Spread the love

ಬೆಂಗಳೂರು: ಯುಪಿಐ ಹಾಗೂ ಡಿಜಿಟಲ್​ ವಹಿವಾಟು ಆಧರಿಸಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ದಂಡದ ಜೊತೆ ಜಿಎಸ್​ಟಿ ಪಾವತಿ ಮಾಡುವಂತೆ ನೋಟಿಸ್​ ನೀಡುತ್ತಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಗಣನೀಯ ಸಂಖ್ಯೆಯಲ್ಲಿ ಸಣ್ಣ ವ್ಯಾಪಾರಸ್ಥರು ಡಿಜಿಟಲ್​ ಪಾವತಿಗಳನ್ನು ಬಿಟ್ಟು ನಗದು ವಹಿವಾಟಿಗೆ ಮರಳುತ್ತಿದ್ದಾರೆ.

ಬೆಂಗಳೂರು, ಮೈಸೂರು ಮುಂತಾದ ನಗರಗಳಲ್ಲಿ ಹಾಗೂ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರಸ್ಥರು ನಗದು ವಹಿವಾಟಿಗೆ ಮರಳುತ್ತಿದ್ದು, ಭಾರತದ ಡಿಜಿಟಲ್​ ಪಾವತಿ ವ್ಯವಸ್ಥೆಯ ಭವಿಷ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಒಂದು ಕಾಲದಲ್ಲಿ ಸರ್ಕಾರ ನಗದು ವಹಿವಾಟಿನಿಂದ ಡಿಜಿಟಲ್​ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಪ್ರಚಾರ ಮಾಡಿತ್ತು.

ಕೆಲವು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್​ಟಿ ಪಾವತಿಸುವಂತೆ ನೋಟಿಸ್​ ನೀಡಿರುವುದು ಸುದ್ದಿಯಾಗುತ್ತಿದ್ದಂತೆ ಅಂಗಡಿಯವರು, ಹೋಟೆಲ್​ ಮಾಲೀಕರು, ಪಿಜಿ ಮಾಲೀಕರು, ಬೀದಿ ವ್ಯಾಪಾರಿಗಳು ಮತ್ತು ಆಟೋ ಚಾಲಕರೂ ಸಹ ಯುಪಿಐ ಪಾವತಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚಿನ ಕೆಲವು ಹಣಕಾಸು ವರ್ಷಗಳಲ್ಲಿ ಯುಪಿಐ ಮೂಲಕ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯುಪಿಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿದ ವಾಣಿಜ್ಯ ತೆರಿಗೆ ಇಲಾಖೆ ಅನೇಕ ವ್ಯಾಪಾರಸ್ಥರು ಜಿಎಸ್​ಟಿ ನೋಂದಣಿ ಮಿತಿ ಮೀರಿದ್ದು, ರಿಟರ್ನ್ಸ್​ ಸಲ್ಲಿಸದೇ ಇರುವುದನ್ನು ಗುರುತಿಸಿದ್ದಾರೆ. ಅಂತಹ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆ ದಂಡ ಸಹಿತ ಜಿಎಸ್​ಟಿ ಪಾವತಿಸುವಂತೆ ನೋಟಿಸ್​ ನೀಡಿದೆ. ಇದು ಸಣ್ಣಪುಟ್ಟ ವ್ಯಾಪಾರಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿನ ಹೋಟೆಲ್​ ಉದ್ಯಮಿಯೊಬ್ಬರು ಮಾತನಾಡಿ, “ಕೆಲವು ವರ್ಷಗಳಿಂದ ಈ ಹಣ ಸ್ವೀಕರಿಸಲು ಯುಪಿಐ ಸುಲಭವಾದ ಮಾರ್ಗವಾಗಿತ್ತು. ಆದರೆ ನಾನು ಪ್ರತೀ ವಹಿವಾಟಿಗೂ ದಾಖಲೆಗಳನ್ನು ಇಡಲು ಸಾಧ್ಯವಿಲ್ಲ. ಈ ಜಿಎಸ್​ಟಿ ಕಾರ್ಯವಿಧಾನಗಳು ಹಾಗೂ ದಂಡಗಳನ್ನು ಎದುರಿಸುವುದಕ್ಕಿಂತ ಕೆಲವು ಗ್ರಾಹಕರನ್ನು ಕಳೆದುಕೊಳ್ಳುವುದೇ ಉತ್ತಮ” ಎಂದು ಹೇಳಿದರು.

ಕ್ಯೂಆರ್​ ಕೋಡ್​ ಮಾಯ-‘ನಗದು ಮಾತ್ರ’ ಬೋರ್ಡ್​ ಪ್ರತ್ಯಕ್ಷ: ಜಿಎಸ್​ಟಿ ದಂಡಕ್ಕೆ ಹೆದರಿರುವ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದಿದ್ದ ಕ್ಯೂಆರ್​ ಕೋಡ್​ ಸ್ಟಿಕ್ಕರ್​ಗಳನ್ನು ಕಿತ್ತುಹಾಕಿ, Cash Only ಎನ್ನುವ ಫಲಕಗಳನ್ನು ಹಾಕುತ್ತಿದ್ದಾರೆ. ಹೋಟೆಲ್​, ಅಂಗಡಿಗಳು ಮಾತ್ರವಲ್ಲದೆ, ಅಸಂಘಟಿತ ವಲಯಗಳ ಸಣ್ಣ ವ್ಯಾಪಾರಿಗಳು, ಬೇಕರಿಗಳು, ಕಾಂಡಿಮೆಂಟ್ಸ್​, ಟೀ ಅಂಗಡಿಗಳು, ಹೂವು ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳು ಕೂಡ ಇದನ್ನೇ ಅನುಕರಿಸುತ್ತಿದ್ದಾರೆ.

ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಹೂ ಮಾರಾಟ ಮಾಡುವ ಮಹಿಳೆ ನಮಿತಾ ಎನ್ನುವವರು ಅಕ್ಕಪಕ್ಕದ ಅಂಗಡಿ ವ್ಯಾಪಾರಸ್ಥರಿಗೆ ಜಿಎಸ್​ಟಿ ಪಾವತಿಸುವಂತೆ ನೋಟಿಸ್​ ಬಂದ ನಂತರ ಇವರೂ ಕೂಡ, ಯುಪಿಐ ಮೂಲಕ ಹಣ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. “ಗ್ರಾಹಕರು ನಗದು ಇಲ್ಲವೆಂದು ಯುಪಿಐ ಪಾವತಿಗಾಗಿ ನನ್ನ ಬಳಿ ವಾದಿಸುತ್ತಾರೆ. ನಂತರ ಹಣವಿಲ್ಲದೆ ಹೊರಟು ಹೋಗುತ್ತಾರೆ. ಹಾಗಾಗಿ ಈ ವಾರ ನನ್ನ ಗಳಿಕೆ ಶೇ.30ರಷ್ಟು ಕಡಿಮೆಯಾಗಿದೆ” ಎಂದು ಅವರು ಹೇಳಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ