ಹಾವೇರಿ: ಜಾನಪದ ಸೊಗಡಿನ ಕಲೆಗಳಲ್ಲಿ ಒಂದಾದ ಹಗಲುವೇಷವನ್ನು ಅಲೆಮಾರಿ ಬುಡುಗ ಜಂಗಮ ಸಮುದಾಯದವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ತಲೆತಲಾಂತರದಿಂದ ಈ ಸಮುದಾಯ ಹಗಲುವೇಷ ಹಾಕಿಕೊಂಡು ಕಲೆ ಪ್ರದರ್ಶನ ಮಾಡುತ್ತದೆ. ಐದು ಜನರ ತಂಡ ಹಾರ್ಮೋನಿಯಂ, ತಬಲಾ ಮತ್ತು ಗಾಯಕನೊಂದಿಗೆ ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಪೌರಾಣಿಕ ಪಾತ್ರಗಳನ್ನು ಹಾಕಿಕೊಂಡು ಮನೆ ಮನೆಗೆ ತೆರಳುತ್ತದೆ. ಸುಮಾರು ಮೂರು ದಿನಗಳ ಕಾಲ ವಿವಿಧ ಪಾತ್ರಗಳನ್ನು ಧರಿಸಿ ಜನರನ್ನು ರಂಜಿಸುವ ತಂಡ ಮೂರನೆಯ ದಿನ ಜನರು ನೀಡುವ ಹಣ ಸ್ವೀಕರಿಸುತ್ತದೆ. ಆದರೀಗ ಈ ಕಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಶ್ರೀರಾಮ, ಲಕ್ಷ್ಮಣ, ಆಂಜನೇಯ, ವಿಶ್ವಾಮಿತ್ರ, ವಶಿಷ್ಠ, ಈಶ್ವರ, ಭಸ್ಮಾಸುರ, ಕೃಷ್ಣ, ಪಾರಿಜಾತ, ಬಕಾಸುರ, ಏಕಲವ್ಯ, ಭೀಮ, ಬೇಡರಕಣ್ಣಪ್ಪ ಸೇರಿದಂತೆ ಹಲವು ಪಾತ್ರಧಾರಿಗಳಾಗಿ ಈ ತಂಡ ಮನೆ ಮನೆಗೆ ತೆರಳುತ್ತದೆ. ಮೊದಮೊದಲು ಊರೂರು ಅಲೆಯುತ್ತಿದ್ದ ತಂಡಗಳು ಇದೀಗ ಜಿಲ್ಲೆಯಲ್ಲಿಯೇ ತಮ್ಮ ಗ್ರಾಮಗಳನ್ನು ಹಂಚಿಕೊಂಡು ತಂಡ ಕಟ್ಟಿಕೊಂಡು ಹಗಲುವೇಷ ಹಾಕುತ್ತಿವೆ.
ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಹಗಲುವೇಷ ಕಲೆ ಹೋರಾಟಗಾರರ ನಡುವೆ ಸಂಪರ್ಕ ಸೇತುವೆಯಾಗಿತ್ತು. ಜನರಿಗೆ ತಮ್ಮ ಕಲೆಗಳ ಮೂಲಕ ದೇಶಪ್ರೇಮ ಹುಟ್ಟುಹಾಕುವಲ್ಲಿ ಹಗಲುವೇಷ ತನ್ನದೇ ಆದ ಪಾತ್ರವಹಿಸಿತ್ತು. ಟಿವಿ ಬಂದಾಗ ಹಿನ್ನಡೆ ಅನುಭವಿಸಿದ್ದ ಈ ಕಲೆ ಇದೀಗ ಮೊಬೈಲ್ ಯುಗದಲ್ಲಿ ಮೂಲೆಗುಂಪಾಗುತ್ತಿದೆ.
ಹಗಲುವೇಷಕ್ಕಿಂತ ವೈವಿಧ್ಯಮಯ ಮನರಂಜನೆಗಳು ಜನರಿಗೆ ಮೊಬೈಲ್‌ನಲ್ಲಿ ಸಿಗಲಾರಂಭಿಸಿದೆ. ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ, ಫೇಸ್ಬುಕ್ ಸೇರಿದಂತೆ ಹಲವು ಅಪ್ಲಿಕೇಶನ್ಗಳಿಂದ ಜನರು ನೈಜ ಕಲೆಯತ್ತ ಮುಖಮಾಡುತ್ತಿಲ್ಲ. ರೀಲ್ಸ್ ಸೇರಿದಂತೆ ರಂಗುರಂಗಿನ ಲೋಕದಲ್ಲಿ ಯುವಜನತೆ ತಲ್ಲೀನರಾಗುತ್ತಿದ್ದಾರೆ. ಇತ್ತ ತಲೆತಲಾಂತರದಿಂದ ಹಗಲುವೇಷ ಕಲಿತ ಕಲಾವಿದರಿಗೆ ಅವರ ಮಕ್ಕಳೇ ಹಗಲುವೇಷದತ್ತ ಒಲವು ತೋರದಿರುವುದೂ ಸಹ ಬೇಸರ ತರಿಸಿದೆ. ಈ ಮಧ್ಯೆ ಸರ್ಕಾರ ಹಗಲುವೇಷ ಕಲಾವಿದರನ್ನು ಗೌರವವಯುತವಾಗಿ ನಡೆಸಿಕೊಂಡಿಲ್ಲ ಎನ್ನುತ್ತಾರೆ ಈ ಕಲಾವಿದರು.
Laxmi News 24×7