ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹದ ಪ್ರಮಾಣ ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ), 2025 ಕರಡು ಮಸೂದೆ ಸಿದ್ಧಪಡಿಸಿದೆ.
ಆಧುನಿಕ ಕಾಲಮಾನದಲ್ಲೂ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಅವ್ಯಾಹತವಾಗಿ ಮುಂದುವರೆದಿದೆ. ಅದರಲ್ಲೂ ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲೂ ಅನಿಷ್ಟ ಪದ್ಧತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪ್ರತಿ ವರ್ಷ ಕ್ರಿಯಾ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಅದು ಯಾವುದೂ ನಿರೀಕ್ಷಿತ ಫಲ ನೀಡುತ್ತಿಲ್ಲ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
4 ವರ್ಷಗಳಲ್ಲಿ ರಾಜ್ಯದಲ್ಲಿ 2,165 ಬಾಲ್ಯ ವಿವಾಹ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 20221-22ರಿಂದ 2024-25ರ ವರೆಗೆ ಬರೋಬ್ಬರಿ 2,165 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 2021-22ರಲ್ಲಿ 418 ಬಾಲ್ಯ ವಿವಾಹಗಳು ನಡೆದರೆ, 2022-23ರಲ್ಲಿ 328 ಬಾಲ್ಯ ವಿವಾಹಗಳು ವರದಿಯಾಗಿವೆ. ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾದ 2023-24ರಲ್ಲಿ ಬಾಲ್ಯ ವಿವಾಹ ಪ್ರಕರಣ 719ಕ್ಕೆ ಏರಿಕೆಯಾಗಿದೆ. 2024-25ರಲ್ಲಿ 700 ಬಾಲ್ಯವಿವಾಹಗಳು ಸೇರಿ ಕಾಂಗ್ರೆಸ್ ಆಡಳಿತದ ಎರಡು ವರ್ಷಗಳಲ್ಲೇ 1,416 ಬಾಲ್ಯ ವಿವಾಹಗಳು ಜರುಗಿವೆ.
2024-25 ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹಗಳು ನಡೆದಿವೆ. ಒಟ್ಟು 3,049 ಬಾಲ್ಯ ವಿವಾಹ ದೂರುಗಳು ಸ್ವೀಕೃತವಾಗಿವೆ. ಈ ಪೈಕಿ 2,349 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇದರಲ್ಲಿ ಅತಿ ಹೆಚ್ಚು ಶಿವಮೊಗ್ಗ ಜಿಲ್ಲೆಯಲ್ಲಿ 79 ಬಾಲ್ಯ ವಿವಾಹಗಳು ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ 78 ಬಾಲ್ಯ ವಿವಾಹ ನಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ 74, ಬಾಗಲಕೋಟೆ ಜಿಲ್ಲೆಯಲ್ಲಿ 60, ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ 60 ಹಾಗೂ ಮಂಡ್ಯದಲ್ಲಿ 57 ಬಾಲ್ಯ ವಿವಾಹಗಳು ನಡೆದಿವೆ.
ಬಾಲ್ಯ ವಿವಾಹ ತಡೆಗೆ ಮಸೂದೆ ಸಿದ್ದಪಡಿಸಲು ಸೂಚನೆ: ಮೇ 31ರಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳೊಂದಿಗಿನ ಸಭೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕುರಿತಾಗಿ ಗಂಭೀರವಾಗಿ ಚರ್ಚಿಸಲಾಗಿತ್ತು. ಸಭೆಯಲ್ಲಿ ಈ ಪಿಡುಗನ್ನು ತಡೆಯಲು ವಿಫಲವಾಗಿರುವ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ, ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಮೌಖಿಕವಾಗಿ, ಬಾಲ್ಯವಿವಾಹಗಳನ್ನು ಮಾಡಲು ಪ್ರಯತ್ನ, ಸಿದ್ಧತೆ ಹಾಗೂ ನಿಶ್ಚಿತಾರ್ಥ ಮಾಡುವುದರ ವಿರುದ್ಧ ಒಂದು ವಿಧೇಯಕವನ್ನು ಸಿದ್ಧಪಡಿಸಲು ಸೂಚಿಸಿದ್ದರು.
ಈಗಾಗಲೇ ಕೇಂದ್ರದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 (Central Act 6 of 2007) ಅಧಿನಿಯಮ ಜಾರಿಯಲ್ಲಿದೆ. ಜೊತೆಗೆ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ, 2021 ಲೋಕಸಭೆಯಲ್ಲಿ ಅಂಗೀಕಾರಕ್ಕಾಗಿ ಬಾಕಿ ಇದೆ. 2006ರ ಕೇಂದ್ರದ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಕರಡು ಮಸೂದೆ ಸಿದ್ದಪಡಿಸಿದೆ. ಈ ಕರಡು ಮಸೂದೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಅನುಮೋದನೆ ಪಡೆದು, ವಿಧೇಯಕವನ್ನು ಪರಿಶೀಲನಾ ಸಮಿತಿಯ ಮುಂದಿಡಲಾಗಿದೆ.
Laxmi News 24×7