ರಾಯಚೂರು: ”ರಾಜು ಕಾಗೆ ಅವರನ್ನು ಕರೆದು ಮಾತನಾಡುತ್ತೇನೆ. ಸಿಎಂ ಅನುದಾನ ಅಂತ ಇದೆಯಾ? ಅವರು ಹೇಳ್ತಾರಪ್ಪ, ನಾನು ಕರೆದು ಮಾತನಾಡ್ತೀನಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಲವು ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿರುವ ಅವರು, ವಿವಿಧ ವಿಚಾರಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ”ನನಗೆ ಗೊತ್ತಿಲ್ಲ. ಯಾವ ಸನ್ನಿವೇಶದಲ್ಲಿ ಹೇಳಿದ್ದಾರೆ ಅಂತಲೂ ಗೊತ್ತಿಲ್ಲ” ಎಂದರು.
ರಾಯಚೂರು ಕಾರ್ಯಕ್ರಮಕ್ಕೆ ಬಿ.ಆರ್ ಪಾಟೀಲ್ ಅವರನ್ನು ಕರೆದರೂ ಬಂದಿಲ್ಲ ಎಂಬ ಬಗ್ಗೆ, ”ನಾನು ಕರೆದಿದ್ದೆ, ಆದರೆ ಅವರು ಆಯೋಜನಕರು ಕರೆದಿಲ್ಲ, ಹಾಗಾಗಿ ಬರಲ್ಲ ಅಂದರು. ಜೂನ್ 25ಕ್ಕೆ ಭೇಟಿ ಮಾಡುತ್ತೇನೆ ಅಂದಿದ್ದಾರೆ” ಎಂದು ಸಿಎಂ ತಿಳಿಸಿದರು.
ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ”ಅದು ನಮ್ಮ ಕಾಲದಲ್ಲಿ ನಡೆದಿಲ್ಲ. ವಿಶೇಷ ಕೋರ್ಟ್ ಮಾಡಿ, ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ ಎಂದಿದ್ದಾರೆ. ಪಾದಯಾತ್ರೆ ಮಾಡಿದ್ದು ಯಾಕೆಂದರೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಅಂತ. ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ವರದಿ ಆಧರಿಸಿ ನಾನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಅಂದಿನ ಸರ್ಕಾರ ಸರಿಯಾದ ಉತ್ತರ ನೀಡಲಿಲ್ಲ. ಹೀಗಾಗಿ ನಡೆದುಕೊಂಡೇ ಬರುತ್ತೇನೆ ನಡೀಯಪ್ಪ ಅಂತ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು” ಎಂದು ವಿವರಿಸಿದರು.
Laxmi News 24×7