ಬೆಂಗಳೂರು, (ಜೂನ್ 19): ಸರ್ಕಾರಿ ಯೋಜನೆಗಳ (Government scheme) ಗುತ್ತಿಗೆಯಲ್ಲಿ ಮೀಸಲಾತಿ (Reservation) ನೀಡಿದ ಬಳಿಕ ಈಗ ವಸತಿ ಯೋಜನೆಯಲ್ಲೂ ಅಲ್ಪಸಂಖ್ಯಾತರ ಮೀಸಲಾತಿ (minorities reservation) ಹೆಚ್ಚಳಕ್ಕೆ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ. ಇಂದು (ಜೂನ್ 19) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ತೀರ್ಮಾನ ಮಾಡಿದೆ. ವಸತಿಯೋಜನೆಯಡಿ ಮುಸ್ಲಿಂ ಸೇರಿದಂತೆ ಇತರೆ ಅಲ್ಪ ಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10ರಿಂದ ಶೇ.15ಕ್ಕೆ ಏರಿಸಲು ಸಚಿವ ಸಂಪುಟ ಅಸ್ತು ಎಂದಿದೆ.ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿಯನ್ನು ಪ್ರಸ್ತುತ ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಸಿಎಂ ಸಿದ್ದರಾಮಯ್ಯನವರ ಮುಂದೆ ಇಟ್ಟಿದ್ದರು. ಇದೀಗ ಈ ಪ್ರಸ್ತಾವನೆಯನ್ನು ಇಂದಿನ ಕರ್ನಾಟಕ ಸಚಿವ ಸಂಪುಟ ಅಂಗೀಕರಿಸಿದೆ. ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಾರಿಗೊಳಿಸುವ ಎಲ್ಲಾ ವಸತಿ ಯೋಜನೆಗಳಿಗೆ ಅನ್ವಯಿಸುತ್ತದೆ. ರಾಜ್ಯದಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಯಲ್ಲಿ ಮೀಸಲಾತಿ ಸೌಲಭ್ಯ ಸಿಗಲಿದೆ.
Laxmi News 24×7