ಬೆಂಗಳೂರು: ಜೈಲಿನಿಂದ ಬಿಡುಗಡೆಯಾದವನನ್ನು ಮಾತುಕತೆಗೆಂದು ಕರೆಸಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ದೀಪು (28) ಹಾಗೂ ಅರುಣ್ (27) ಎಂಬ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸುವ ಮೂಲಕ ಬಂಧಿಸಲಾಗಿದೆ. ಶನಿವಾರ ರಾತ್ರಿ ಜೆ. ಜೆ. ನಗರದ ಜನತಾ ಕಾಲೋನಿಯಲ್ಲಿ ವಿಜಯ್ (26) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಆರೋಪಿಗಳು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಪರಸ್ಪರ ವೈಷಮ್ಯ ಹೊಂದಿದ್ದ ಅರುಣ್ ಹಾಗೂ ವಿಜಯ್, ಕೆಲ ತಿಂಗಳುಗಳ ಹಿಂದೆ ಕಿತ್ತಾಡಿಕೊಂಡಿದ್ದರು. ಆ ಸಮಯದಲ್ಲಿ ಅರುಣ್‌ಗೆ ಚಾಕುವಿನಿಂದ ಇರಿದಿದ್ದ ವಿಜಯ್, ಹತ್ಯೆ ಯತ್ನದ ಆರೋಪದಡಿ ಜೈಲುಪಾಲಾಗಿದ್ದ. ಚಾಕುವಿನಿಂದ ಇರಿದಿದ್ದ ವಿಜಯ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅರುಣ್ ಕಾಯುತ್ತಿದ್ದ. ಶನಿವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ವಿಜಯ್‌ನನ್ನು ರಾಜಿ ಸಂಧಾನಕ್ಕೆಂದು ಜನತಾ ಕಾಲೋನಿ ಬಳಿ ಅರುಣ್ ಕರೆಸಿದ್ದ. ರಾತ್ರಿ ಮಾತುಕತೆಗೆಂದು ಬಂದ ವಿಜಯ್‌ನನ್ನು ಅರುಣ್ ಮತ್ತು ದೀಪು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಆರೋಪಿಗಳ ಕೃತ್ಯ ಇಡೀ ಏರಿಯಾವನ್ನೇ ಬೆಚ್ಚಿ ಬೀಳಿಸಿತ್ತು. ಬಳಿಕ ಪರಾರಿಯಾಗಿದ್ದ ಆರೋಪಿಗಳು ರಾಜರಾಜೇಶ್ವರಿ ನಗರದ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಜೆ. ಜೆ. ನಗರ ಠಾಣೆ ಪೊಲೀಸರು, ಆರೋಪಿಗಳು ಅಡಗಿರುವ ಸ್ಥಳದ ಮಾಹಿತಿ ದೊರೆತ ಬಳಿಕ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳಿಬ್ಬರೂ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್ಸ್‌ಪೆಕ್ಟರ್ ಕೆಂಪೇಗೌಡ ಅವರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೂ ಸಹ ಆರೋಪಿಗಳು ಮಾರಕಾಸ್ತ್ರಗಳನ್ನ ಬಳಸಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದರು. ಬಳಿಕ ಇಬ್ಬರ ಕಾಲಿಗೂ ಇನ್ಸ್‌ಪೆಕ್ಟರ್ ಕೆಂಪೇಗೌಡ ಅವರು ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟು ತಗುಲಿರುವ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7