ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ಸಂದರ್ಭದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಹಾಗು ಇತರರಿಗೆ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ನಿಕಿಲ್ ಸೋಸಲೆ, ಡಿಎನ್ಎ ಎಂಟರ್‌ಟೈನ್ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಶಮಂತ್ ಮಾವಿನಕೆರೆ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಆದೇಶ ನೀಡಿತು.
ಸರ್ಕಾರ ಮತ್ತು ಜೈಲು ಪ್ರಾಧಿಕಾರವು ತಕ್ಷಣವೇ ಅರ್ಜಿದಾರರನ್ನು ಬಿಡುಗಡೆ ಮಾಡಬೇಕು. ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿದ ಪ್ರಾಸಿಕ್ಯೂಷನ್ ಸಾಕ್ಷ್ಯಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆದರಿಕೆ ಹಾಕಬಾರದು. ಸಾಕ್ಷ್ಯಧಾರಗಳನ್ನು ತಿರುಚಬಾರದು. ತನಿಖೆಗೆ ಅಡ್ಡಿಪಡಿಸಬಾರದು. ಪ್ರಕರಣ ಕುರಿತ ಕಬ್ಬನ್ ಪಾರ್ಕ್ ಠಾಣಾ ಪೊಲೀಸರ ತನಿಖೆ, ನ್ಯಾಯಾಂಗ ಆಯೋಗದ ಮತ್ತು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಅರ್ಜಿದಾರರು ಸಹಕರಿಸಬೇಕು. ಅರ್ಜಿದಾರರು ತಲಾ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಜಾಮೀನಿನ ಮೇಲೆ ಬಿಡುಗಡೆಯಾದ ದಿನದಿಂದ ಮುಂದಿನ ಎರಡು ವಾರದಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ಹೈಕೋರ್ಟ್ ಅನುಮತಿಯಿಲ್ಲದೆ ಬೆಂಗಳೂರು ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಪ್ರಕರಣದಲ್ಲಿ ಕಾರ್ಯಕ್ರಮವನ್ನು ಆರ್‌ಸಿಬಿ, ಡಿಎನ್‌ಎ ಕಂಪನಿಗಳ ಆಡಳಿತ ಮಂಡಳಿ ಆಯೋಜಿಸಿದೆ. ಆದರೆ, ಅರ್ಜಿದಾರರು ಆರ್‌ಸಿಬಿ ಮತ್ತು ಡಿಎನ್‌ಎ ಅಧಿಕಾರಿಗಳು, ಉದ್ಯೋಗಿಗಳು, ನಿರ್ದೇಶಕರಾಗಿದ್ದು ಅವರನ್ನು ಕಂಪನಿಗಳೊಂದಿಗೆ ಸಮಾನವಾಗಿ ಕಾಣಲು ಸಾಧ್ಯವಿಲ್ಲ. ಅವರನ್ನು ಬಂಧಿಸುವ ಮೊದಲು ಘಟನೆಯಲ್ಲಿ ಅವರ ಪಾತ್ರವಿರುವುದನ್ನು ದೃಢಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೆ, ಅದರಲ್ಲೂ ವಿಶೇಷವಾಗಿ ಎಫ್‌ಐಆರ್‌ಗಳಲ್ಲಿ ಅವರನ್ನು ಆರೋಪಿಗಳೆಂದು ಹೆಸರಿಸದಿದ್ದಾಗ ಅರ್ಜಿದಾರರನ್ನು ಆರೋಪಿಸಲಾಗಿರುವ ಅಪರಾಧಗಳಿಗೆ ಪ್ರತ್ಯೇಕವಾಗಿ ಹೊಣೆಗಾರರೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಅರ್ಜಿದಾರರ ಬಂಧನವು ಕಾನೂನುಬದ್ಧವಾಗಿಲ್ಲ. ಈ ತಕರಾರು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ಮೇಲೆ ಬಂಧನದಿಂದ ಬಿಡುಗಡೆಯಾಗಲು ಅವರು ಅರ್ಹರಾಗಿದ್ದಾರೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರನ್ನು ಸಿಸಿಬಿ ಪೊಲೀಸರು ಜೂ.6ರಂದು ಬೆಳಗ್ಗೆ 3ರಿಂದ 3.30ರ ನಡುವೆ ಬಂಧನ ಮಾಡಿ, 4.30ರಿಂದ 4.50ರ ನಡುವೆ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ಅದಾದ 10ರಿಂದ 11 ಗಂಟೆ ವಿಳಂಬವಾಗಿ ಅಂದರೆ ಜೂ.6ರಂದು ಮಧ್ಯಾಹ್ನ 2.30ರ ವೇಳೆಗೆ ಪೊಲೀಸರು, ಅರ್ಜಿದಾರರಿಗೆ ಅವರ ಬಂಧನಕ್ಕೆ ಕಾರಣಗಳನ್ನು (ಅರೆಸ್ಟ್ ಮೊಮೊ) ನೀಡಿದ್ದಾರೆ. ಇಷ್ಟು ವಿಳಂಬಕ್ಕೆ ಪೊಲೀಸರು ಸೂಕ್ತ ವಿವರಣೆ ನೀಡಿಲ್ಲ. ಬಂಧನ ವೇಳೆ ಕಡ್ಡಾಯವಾಗಿ ನೀಡಬೇಕಾದ ಬಂಧನದ ಮಾಹಿತಿ, ಬಂಧನದ ಜ್ಞಾಪನಾಪತ್ರ, ಬಂಧನಕ್ಕೆ ಕಾರಣಗಳು, ತಪಾಸಣಾ ಮೆಮೊ ಸೇರಿದಂತೆ ಇನ್ನಿತರ ಚೆಕ್ಲೀಸ್ಟ್ ದಾಖಲೆ ನೀಡಿಲ್ಲ. ಹೀಗಾಗಿ, ಈ ಅಂಶಗಳಿಂದಲೂ ಅರ್ಜಿದಾರರ ಬಂಧನ ಕಾನೂನುಬದ್ಧವಾಗಿಲ್ಲ ಎಂಬುದಾಗಿ ಹೇಳಬಹುದು ಎಂದು ಪೀಠ ಆದೇಶದಲ್ಲಿ ಹೇಳಿದೆ.
ಅಲ್ಲದೆ, ಮಧ್ಯಂತರ ಜಾಮೀನನ್ನು ನೀಡಬಾರದು. ಅತಿ ಅಪರೂಪದ ಪ್ರಕರಣದಲ್ಲಿ ಮಾತ್ರ ತನಿಖೆಗೆ ತಡೆ ನೀಡಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿಗಳನ್ನು ಬಂಧಿಸಬಾರದೆಂದು ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸುವಂತಿಲ್ಲ. ಆಯೋಜಕರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಬಂಧನವನ್ನು ತಪ್ಪಿಸಿ ಮತ್ತು ಅವರ ಖಾಸಗಿ ಕಾರ್ಯಕ್ರಮಗಳ ಸಮಯದಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪಿದೆ ಎಂದು ರಾಜ್ಯ ಸರ್ಕಾರ ಹಾಗೂ ತನಿಖಾಧಿಕಾರಿಗಳು ಪ್ರತಿಪಾದಿಸುತ್ತಿರುವ ವಾದವು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
Laxmi News 24×7