ಮೈಸೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಇನ್ನು ನಡೆದಿಲ್ಲ. ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಾಶ್ಮೀರದಲ್ಲಿ ಅಮಾಯಕರ ಮೇಲೆ ಉಗ್ರರ ದಾಳಿ ನಡೆಯಬಾರದಿತ್ತು, ನಡೆದಿದೆ. ಇಂತಹ ಕೃತ್ಯಗಳನ್ನ ನಡೆಯದಂತೆ ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಯಾವ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂಬುದನ್ನು ತನಿಖೆಯಿಂದ ಗೊತ್ತಾಗಲಿದೆ. ಘಟನೆಗೆ ಯಾರು ಹೊಣೆ ಅಂತ ಹೇಳುವುದಕ್ಕೆ ಆಗಲ್ಲ. ಮುಂದೆ ಇಂಹ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರ ಎಚ್ಚರವಹಿಸಿಬೇಕು. ಇಂತಹ ಘಟನೆಗೆ ಯಾರು ಹೊಣೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದರು.
ಉಗ್ರರ ಸಂಹಾರ ಆಗಬೇಕು: ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, “ಉಗ್ರರ ಸಂಹಾರಕ್ಕಾಗಿ ಪಕ್ಷಾತೀತವಾಗಿ ಒಗ್ಗೂಡಬೇಕು. ಉಗ್ರರನ್ನು ಮಟ್ಟಹಾಕಲು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಹಿಂದೂಗಳನ್ನೇ ಗುರಿಯಾಗಿಟ್ಟು ದಾಳಿ ಮಾಡಿರುವುದು ಖಂಡನೀಯ. ಉಗ್ರರನ್ನ ಗುಂಡಿಕ್ಕಿ ಕೊಲ್ಲುವ ಶಕ್ತಿಯನ್ನು ನಮ್ಮ ಸೈನಿಕರಿಗೆ ತಾಯಿ ಚಾಮುಂಡೇಶ್ವರಿ ನೀಡಲಿ. ಇಡೀ ಘಟನೆಯನ್ನು ಪ್ರಪಂಚ ಖಂಡಿಸುತ್ತದೆ” ಎಂದು ಹೇಳಿದರು.
ಭಯೋತ್ಪಾದಕರ ದಾಳಿ ಹೇಗಾಯ್ತು ಎಂಬುದು ದೊಡ್ಡ ಪ್ರಶ್ನೆ: ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ದೇಶದಲ್ಲಿ ಬಹಳ ಶಕ್ತಿಯುತ, ಪರಿಣಾಮಕಾರಿಯಾದ ಮಿಲಿಟರಿ ಇಂಟೆಲಿಜೆನ್ಸ್ ಇದ್ದರೂ ಸಹ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹೇಗಾಯ್ತು ಎಂಬುದು ಅತಿದೊಡ್ಡ ಪ್ರಶ್ನೆ. ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತೇನೆ. ಪ್ರಾಣ ಕಳೆದುಕೊಂಡಿರುವ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ತಿಳಿಸಿದರು.
Laxmi News 24×7