ಚಿಕ್ಕೋಡಿ(ಬೆಳಗಾವಿ): ಕಳೆದ ಭಾನುವಾರ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ತಾಯಿ-ಮಗನನ್ನು ಕತ್ತು ಹಿಸುಕಿ, ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳಲ್ಲಿ ಓರ್ವ ಪೊಲೀಸರನ್ನು ಕಂಡು ಹೆದರಿ ಓಡಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೋರ್ವ ಆತ್ಮಹತ್ಯೆಯಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ವಿವರ: ಏಪ್ರಿಲ್ 13ರಂದು ಕೊಡಗಾನೂರು ಗ್ರಾಮದಲ್ಲಿನ ತೋಟದ ವಸತಿ ಪ್ರದೇಶದಲ್ಲಿ ಚಂದ್ರವ್ವ ಅಪ್ಪಾರಾಯ ಇಚೇರಿ (62) ಹಾಗೂ ವಿಠ್ಠಲ್ ಅಪ್ಪರಾಯ ಇಚೇರಿ (42) ಎಂಬ ತಾಯಿ ಮತ್ತು ಮಗನನ್ನು ಕೊಲೆಗೈದ ದುಷ್ಕರ್ಮಿಗಳು ಶವಗಳನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಪರಾರಿಯಾಗಿದ್ದರು. ಸುರೇಶ್ ರಾಮಪ್ಪ ಸವದತ್ತಿ (36) ಹಾಗೂ ಶ್ರೀಶೈಲ ಸಂಗಣ್ಣ ಹೊರಟ್ಟಿಗೆ (40) ಈ ಪ್ರಕರಣದ ಆರೋಪಿಗಳಾಗಿದ್ದರು.
ಈ ಕುರಿತು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾತನಾಡಿ, ”ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಗಳ ಪತ್ತೆ ಹಚ್ಚಿದ್ದರು. ಇದರಲ್ಲಿ ಓರ್ವ ಆರೋಪಿ ಶೇಗುಣಸಿ ಗ್ರಾಮದವನೆಂದು ಖಚಿತವಾಗುತ್ತಿದ್ದಂತೆ, ನಿನ್ನೆ (ಬುಧವಾರ) ಅಥಣಿ ತಾಲೂಕಿನ ಶೇಗುಣಸಿ ಗ್ರಾಮಕ್ಕೆ ಹೋಗಿ ಸ್ಥಳೀಯರನ್ನು ವಿಚಾರಿಸಿದಾಗ ಇನ್ನೋರ್ವ ಆರೋಪಿಯೂ ಅದೇ ಗ್ರಾಮದವನು ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿಯಾದ ಸುರೇಶ್ ಸವದತ್ತಿ ಮನೆಯಲ್ಲಿರಲಿಲ್ಲ. ಆದರೆ ಸುರೇಶನ ಸ್ನೇಹಿತ (ಸಂಗಡಿಗ) ಪೊಲೀಸರು ಮನೆಗೆ ಬಂದಿರುವುದನ್ನು ತಿಳಿದು ತಕ್ಷಣವೇ ಅಲ್ಲಿಂದ ಓಡಿ ಹೋಗಿ, ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದ. ಆಗ ಕಬ್ಬಿನ ಗದ್ದೆಯ ಸುತ್ತಲೂ ನಮ್ಮ ಸಿಬ್ಬಂದಿ ಸುತ್ತುವರಿದಿದ್ದರು” ಎಂದು ತಿಳಿಸಿದರು.
”ಕಬ್ಬಿನ ಗದ್ದೆಯಿಂದ ಮತ್ತೆ ಪರಾರಿಯಾಗಿ ಪಕ್ಕದಲ್ಲಿರುವ ಮನೆಯವರಲ್ಲಿ ತನ್ನ ಮೊಬೈಲ್ಗಳನ್ನು ಕೊಟ್ಟು, ನಮ್ಮ ಮನೆಯವರಿಗೆ ತಲುಪಿಸಿ ಎಂದು ಹೇಳಿ, ಅಲ್ಲೇ ಇದ್ದ ಒಂದು ಹಗ್ಗವನ್ನು ತೆಗೆದುಕೊಂಡು ಓಡಿ ಹೋಗಿದ್ದಾನೆ. ಅಷ್ಟರಲ್ಲಿ ಆ ಮನೆಯವರು ಈತ ಏನೋ ಮಾಡ್ಕೋತಾನೆಂದು ಚೀರಾಟ ನಡೆಸಿದ್ದಾರೆ. ಆ ಚೀರಾಟ ಪೊಲೀಸರ ಕಿವಿಗೆ ಬೀಳುತ್ತದೆ. ಆಗ ತಕ್ಷಣವೇ ಸಿಬ್ಬಂದಿ ಅವನನ್ನು ಬೆನ್ನಟ್ಟಿ ಹೋಗಿ ನೋಡಿದಾಗ ಆ ತೋಟದ ಒಂದು ಮರದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ನಮ್ಮ ಪೊಲೀಸರು ಅವನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಆರೋಗ್ಯ ಚೇತರಿಕೆ ಕಾಣುತ್ತಿದೆ” ಎಂದು ಹೇಳಿದರು.
”ಇದರ ಜೊತೆಗೆ ಪ್ರಮುಖ ಆರೋಪಿಯಾದ ಸುರೇಶ್ ಸವದತ್ತಿಯನ್ನೂ ಕೂಡ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆಗ ಸ್ಥಳೀಯರು ಆತ ಕೃಷ್ಣಾ ನದಿ ಕಡೆ ಹೋಗಿದ್ದಾನೆ ಎಂದು ತಿಳಿಸಿದರು. ನಮ್ಮ ಸಿಬ್ಬಂದಿ ರಾತ್ರಿಯೆಲ್ಲ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಮುಂಜಾನೆ ನದಿ ದಂಡೆಯ ಮರದಲ್ಲಿ ಪ್ರಮುಖ ಆರೋಪಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ಮೃತ ಚಂದ್ರವ್ವಳ ತಂಗಿಯ ಮಗಳ ಗಂಡ. ಇವರ ನಡುವೆ ಯಾವ ರೀತಿಯ ವ್ಯವಹಾರ ಇತ್ತು, ಕೊಲೆಗೆ ಪ್ರಮುಖ ಕಾರಣ ಏನು? ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಇನ್ನೋರ್ವ ಆರೋಪಿ ಶ್ರೀಶೈಲ್ ಕೂಡ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ” ಎಂದು ಮಾಹಿತಿ ನೀಡಿದರು.
Laxmi News 24×7