ಕಲಬುರಗಿ: ಕಲಬುರಗಿ ಜಿಲ್ಲೆ ಕಾಳಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಅತ್ತೆ ಮನೆಯಲ್ಲಿಯೇ 11 ಲಕ್ಷ ರೂ.ಕಳ್ಳತನ ಮಾಡಿದ್ದ ಆರೋಪಿ ಅಳಿಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಕಾಳಗಿ ಪಟ್ಟಣದ ನಿವಾಸಿ ಮೀನಪ್ಪ ಬೆನ್ನೂರ (38) ಬಂಧಿತ ಆರೋಪಿಯಾಗಿದ್ದು, ಆತನಿಂದ 9.30 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಕಳೆದ ಮಾ.28 ರಂದು ರಟಕಲ್ ಗ್ರಾಮದ ಸಿದ್ದಮ್ಮ ಮಲ್ಲೇಶಪ್ಪ ರಟಕಲ್ ಅವರ ಮನೆಯಲ್ಲಿ 11 ಲಕ್ಷ ರೂ. ಕಳ್ಳತನ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ಸಿದ್ದಮ್ಮಳ ತಮ್ಮನ ಮಗ (ಅಳಿಯ) ಮೀನಪ್ಪನ ಹೇಳಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದವು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾನೆ. 9.30 ಲಕ್ಷ ಹಣ ಜಪ್ತಿ ಮಾಡಲಾಗಿದ್ದು, ಇನ್ನುಳಿದ 1.70 ಲಕ್ಷ ರೂ. ಹಣ ಪಡೆದಿರುವ ಮೀನಪ್ಪನ ತಮ್ಮ ಅನಿಲ್ನನ್ನು ಬಂಧಿಸಬೇಕಿದೆ” ಎಂದು ಎಸ್ಪಿ ಮಾಹಿತಿ ನೀಡಿದರು.
ಸಿದ್ದಮ್ಮ ಅವರು ತಮ್ಮ ಜಮೀನು ಪಕ್ಕದಲ್ಲಿನ ಜಮೀನು ಖರೀದಿಸಲೆಂದು 11 ಲಕ್ಷ ರೂ. ಹಣ ತಂದು ಕಾಳಗಿಯ ಮನೆಯಲ್ಲಿ ಇಟ್ಟಿದ್ದರು. ಮಾರ್ಚ್ 28ರ ಬೆಳಗ್ಗೆ ಜಮೀನಿಗೆ ಹೋಗಿ ಸಂಜೆ ವಾಪಸ್ ಬಂದು ನೋಡಿದಾಗ ಮನೆಯಲ್ಲಿನ ಹಣ ಕಳುವಾಗಿತ್ತು. ಕುಟುಂಬಕ್ಕೆ ಪರಿಚಯ ಇರುವವರೇ ಕಳ್ಳತನ ಮಾಡಿದ್ದು, ಮೇಲ್ನೋಟಕ್ಕೆ ಕಂಡು ಬಂದಿತ್ತು.
ಪೊಲೀಸರ ಮುಂದೆ ಹಾಗೂ ಕುಟುಂಬಸ್ಥರ ಮುಂದೆ ಮೀನಪ್ಪನ ವರ್ತನೆಯ ವಿಚಿತ್ರವಾದಾಗ ಈತನ ಮೇಲೆ ಶಂಕೆ ವ್ಯಕ್ತವಾಗಿತ್ತು. ಹೊರಗಿನವರು ಬಂದು ಕದ್ದುಕೊಂಡು ಹೋಗಿರಬೇಕು ಎಂದು ಪದೇ ಪದೇ ಹೇಳುತ್ತಿದ್ದ. ಪೊಲೀಸರ ವಿಚಾರಣೆಯಲ್ಲಿ ಪ್ರತಿ ಬಾರಿ ಬೇರೆ – ಬೇರೆ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದ. ಇದರಿಂದ ಆತನ ಮೇಲಿನ ಅನುಮಾನವೂ ಬಲವಾಗಿತ್ತು. ಪೊಲೀಸರಿಗೆ ತನ್ನ ಕಳ್ಳತನದ ಬಗ್ಗೆ ತಿಳಿದಿದೆ ಎಂದು ಗೊತ್ತಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮೀನಪ್ಪನನ್ನು ಟೆಂಗಳಿ ಕ್ರಾಸ್ನಲ್ಲಿ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದರು
Laxmi News 24×7