ಬೆಂಗಳೂರು: ಬಿಸಿಲ ಝಳ ಹೆಚ್ಚಾಗುತ್ತಿದ್ದು ಕಲಬುರಗಿ ಹೈಕೋರ್ಟ್ ಪೀಠದ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 8ಕ್ಕೆ ಆರಂಭವಾಗುವ ಕಲಾಪವು ಮಧ್ಯಾಹ್ನ 1.30ಕ್ಕೆ ಮುಗಿಯಲಿದೆ. ಇದೇ ನಿಯಮವನ್ನು ಕಲಬುರಗಿ ಮತ್ತು ಬೆಳಗಾವಿ ವಿಭಾಗದ 8 ಜಿಲ್ಲಾ ನ್ಯಾಯಾಲಯಗಳಿಗೂ ವಿಸ್ತರಿಸಲಾಗಿದೆ.
ಏಪ್ರಿಲ್ 3ರಿಂದ ಸಮಯ ಬದಲಾವಣೆ ಜಾರಿಗೆ ಬಂದಿದ್ದು, ಮೇ 31ರವರೆಗೂ ಮುಂದುವರೆಯಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಹಾಗೂ ಬೆಳಗಾವಿ ವಿಭಾಗದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ನ್ಯಾಯಾಂಗ ಮತ್ತು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಕಲಾಪಗಳು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, 11ರವರೆಗೆ ನಡೆಯಲಿದೆ. ಅರ್ಧ ತಾಸು ವಿರಾಮವಿರಲಿದ್ದು, ಆನಂತರ 11.30ರಿಂದ 1.30ರವರೆಗೆ ಕಲಾಪ ನಡೆಯಲಿದೆ. ಕಚೇರಿಯು ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ. ಶನಿವಾರ ಬೆಳಗ್ಗೆ 7.30ರಿಂದ 11.30ರವರೆಗೆ ಕಚೇರಿ ಕಾರ್ಯ ನಿರ್ವಹಿಸಲಿದೆ.ಸಿವಿಲ್, ಕ್ರಿಮಿನಲ್, ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯಗಳಲ್ಲಿನ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ನಾಲ್ಕನೇ ಶನಿವಾರದಂದು ಜಿಲ್ಲಾ ನ್ಯಾಯಾಂಗದಲ್ಲಿ ಕಲಾಪವು ಬೆಳಗ್ಗೆ 7.30ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 12ಕ್ಕೆ ಮುಕ್ತಾಯವಾಗಲಿದೆ. ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.
Laxmi News 24×7