ಕಿತ್ತೂರು: ನವಜಾತ ಶಿಶುವಿನ ಹತ್ಯೆ, ಕೊಲೆ ಪ್ರಕರಣದಲ್ಲಿ ಪ್ರೇಮಿಗಳು ಅಂದರ್-ಎಸ್ ಪಿ ಡಾ. ಭೀಮಾಶಂಕರ ಗುಳೇದ
ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನವಜಾತ ಶಿಶುವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಪ್ರೇಮಿಗಳನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ಡಾ. ಭೀಮಾಶಂಕರ್ ಗುಳೇದ ಅವರು, ಅಂಬಡಗಟ್ಟಿ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶುವಿನ ಶವವು ತಿಪ್ಪೆಯಲ್ಲಿ ಸಿಕ್ಕಿತ್ತು.
ಈ ಪ್ರಕರಣದ ಕುರಿತು ಪೊಲೀಸರು ನವಜಾತ ಶಿಶುವಿನ ಪರಿತ್ಯಾಗ ಮತ್ತು ಸಾವು ಬಿಎನ್ಎಸ್ 94 ರ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿದ್ದರು. ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರವನ್ನೂ ನೆರವೇರಿಸಲಾಗಿತ್ತು. ನಂತರ ಆರೋಪಿಗಳನ್ನು ಬಯಲಿಗೆಳೆಯಲು ತನಿಖೆ ನಡೆಸಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಿಶುವಿನ ತಲೆಗೆ ಪೆಟ್ಟಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ನಂತರ ಕಿತ್ತೂರು ಪಿಎಸ್ಐ ಪ್ರವೀಣ್, ಸಿಪಿಐ ಶಿವಾನಂದ ಅವರು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಮುಂದುವರೆಸಿದಾಗ ಬಯಲಾಗಿದ್ದೆ ಕರುಳು ಹಿಂಡುವ ಕೃತ್ಯ. ಅಂಬಡಗಟ್ಟಿ ಗ್ರಾಮದ ಮುಸ್ಕಾನ್ ಉರ್ಫ್ ಸಿಮ್ರನ್ ಎಂಬ ಯುವತಿ ಹಾಗೂ ಅದೇ ಗ್ರಾಮದ ಮಹಾಬಳೇಶ್ವರ ಕಾಮೋಜಿ ಎಂಬಾತ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅದರ ಫಲವಾಗಿ ಯುವತಿ ಗರ್ಭಿಣಿಯಾಗಿ ಮಾರ್ಚ್ 5ರಂದು ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿ ಯಾರಿಗೂ ಗೊತ್ತಾಗದಂತೆ ಉಸಿರುಗಟ್ಟಿಸಿ ಪೆಟ್ಟಿಗೆಯಲ್ಲಿ ಹಾಕುತ್ತಾಳೆ.
ಈ ದುಷ್ಕೃತ್ಯ ಮಾಡಲು ಮಹಾಬಳೇಶ್ವರ ವಿಡಿಯೋ ಕಾಲ್ ಮೂಲಕ ಆಕೆಗೆ ಮಾರ್ಗದರ್ಶನ ನೀಡುತ್ತಾನೆ. ಈ ಕಾರಣದಿಂದ ಶಿಶುವಿನ ತಾಯಿ ಮುಸ್ಕಾನ ಹಾಗೂ ಗರ್ಭಿಣಿಯಾಗಲು ಕಾರಣನಾದ ಮಹಾಬಳೇಶ್ವರ ಇಬ್ಬರನ್ನು ನಿನ್ನೆ ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಇದೊಂದು ಅತ್ಯಂತ ದುರುದೃಷ್ಟಕರ ನಿಷ್ಕರುಣೆಯಿಂದ ಕೂಡಿದ ಘಟನೆಯಾಗಿದ್ದು ಕಿತ್ತೂರು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿದ್ದು ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು
Laxmi News 24×7