ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನ ಹಿಡಿದ ಪೊಲೀಸರು..
ಚಾಲಕನಿಗೆ ಚಾಕು ಇರಿದು ಲಾರಿ ಕಳ್ಳತನ ಮಾಡಿದ್ದ ಕಳ್ಳರು ಪರಾರಿ…ಲಾರಿ ವಶಕ್ಕೆ!!
ಜೀವದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನವನ್ನು ಹಿಡಿಯುವುದರಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಬಾಡಗಂಡಿ ಕ್ರಾಸ್ ಬಳಿ ಮದ್ಯ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಜೀವದ ಹಂಗು ತೊರೆದು ಚೆಸ್ ಮಾಡಿ ವಾಹನವನ್ನು ಹಿಡಿಯಲಾಗಿದೆ.
ಆದರೇ, ಕಳ್ಳರು ಎಸ್ಕೇಪ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಬಳಿ ಕಿರಾಣಿ ಅಂಗಡಿ ಸಾಮಗ್ರಿಗಳನ್ನ ತುಂಬಿದ್ದ ಬುಲೆರೋ ಪಿಕಪ್ ವಾಹನವನ್ನು ಕಳ್ಳತನ ಮಾಡಲಾಗಿತ್ತು. ಚಾಲಕನಿಗೆ ಚಾಕು ಇರಿದು ವಾಹನವನ್ನು ಕಳುವು ಮಾಡಿಕೊಂಡು ಬರುತ್ತಿದ್ದರು. ಈ ಕುರಿತು ಬೆಳಗಾವಿ ಪೊಲೀಸರು ಕಳುವಾದ ವಾಹನ ಬಾಗಲಕೋಟೆ ಬಳಿ ಹೋಗುತ್ತಿರುವುದಾಗಿ ಬೀಳಗಿ ಪೊಲೀಸರಿಗೆ ತಿಳಿಸಿದಾಗ ಬೀಳಗಿ ಕ್ರಾಸ್ ಬಳಿ ಎರಡು ಕಡೆ ನಾಕಾಬಂದಿ ಹಾಕಿದ್ದರು.
ಆದರೇ, ಚಾಲಾಕಿ ಕಳ್ಳರು ಪೊಲೀಸ್ ಬ್ಯಾರಿಗೇಡ್ ಗುದ್ದಿ ಪರಾರಿಯಾಗಲು ಯತ್ನಿಸಿದರು. ಬಳಿಕ ಎರಡನೇ ನಾಕಾ ಬಂದಿಯಲ್ಲಿ ಟ್ರಕ್ ಅಡ್ಡ ನಿಲ್ಲಿಸಿ ಕಾರ್ಯಾಚರಣೆ ನಡೆಸುತ್ತಿರುವಾಗ, ಟ್ರಕ್ ಪಕ್ಕದಲ್ಲಿದ್ದ ಪೊಲೀಸರಿಗೂ ಗುದ್ದಲು ಯತ್ನಿಸಿದಾಗ ಪೊಲೀಸ್ ಪೇದೆ ಬ್ಯಾರಿಕೇಡ್’ನ್ನು ತಳ್ಳಿದ್ದಾರೆ. ಟೈರ್ ಅಡಿ ಬ್ಯಾರಿಗೇಡ್ ಸಿಲುಕಿದ್ರೂ ಅದರ ಮೇಲೆ ಟ್ರಕ್ ಹತ್ತಿಸಿಕೊಂಡು ಕಳ್ಳರು ಮುಂದೆ ಸಾಗಿದ್ದಾರೆ. ಬಳಿಕ ವಾಹನ ಬೆನ್ನು ಹತ್ತಿ ಅಡ್ಡಗಟ್ಟುತ್ತಿದ್ದಂತೆ ವಾಹನ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. MH 10 BR 4667 ನಂಬರ್ ನ ಬುಲೆರೋ ವಶಕ್ಕೆ ಪಡೆಯಲಾಗಿದ್ದು, ಪರಾರಿಯಾದ ಕಳ್ಳರ ಪತ್ತೆಗಾಗಿ ಜಾಲ ಬೀಸಲಾಗಿದೆ. ಬೀಳಗಿ ಪಿ ಎಸ್ ಐ ಪ್ರವೀಣ್ ಬೀಳಗಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7