ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಯುವಕರು ಸೇರಿದಂತೆ ವಿವಿಧ ವಯೋಮಾನದವರ ಹಠಾತ್ ಹೃದಯಾಘಾತ ಸಾವಿನ ಪ್ರಕರಣಗಳಿಗೂ ಮತ್ತು ಕೋವಿಡ್ ಲಸಿಕೆ ಪಡೆದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಕೋವಿಡ್ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ‘ಹಾರ್ಟ್ ಅಟ್ಯಾಕ್’ಗಳು ಸಂಭವಿಸಿವೆ ಎನ್ನುವುದು ವೈದ್ಯಕೀಯ ತನಿಖೆಯಲ್ಲಿ ದೃಢಪಟ್ಟಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ ತಾಂತ್ರಿಕ ಸಮಿತಿಯು ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲಿ ದಿಢೀರ್ ಹೃದಯಾಘಾತಗಳಿಗೆ ಜನರು ಬಲಿಯಾಗುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣವಿರಬಹುದೆನ್ನುವ ಸಂಶಯಗಳ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದರು. ಈ ಬಗ್ಗೆ ತಾಂತ್ರಿಕ ಸಮಿತಿಯು ಸುಮಾರು 250ಕ್ಕೂ ಹೆಚ್ಚು ಹೃದಯಾಘಾತ ಸಾವಿನ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ಆರೋಗ್ಯ ಇಲಾಖೆಗೆ ವರದಿ ನೀಡಿದೆ.
ಕೋವಿಡ್ ಲಸಿಕೆ ಹೃದಯದ ರಕ್ಷಣೆ ಮಾಡುತ್ತದೆ: ಜಯದೇವ ಹೃದಯರೋಗ ಮತ್ತು ಸಂಶೋಧನಾ ಆಸ್ಪತ್ರೆಗೆ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಯಿಂದ ದಾಖಲಾಗಿದ್ದ 45 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯೋಮಾನದ 251 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಕೋವಿಡ್ ಲಸಿಕೆಗೂ ಮತ್ತು ಹೃದಯರೋಗಕ್ಕೂ ಸಂಬಂಧವಿಲ್ಲವೆನ್ನುವುದು ಖಚಿತಪಟ್ಟಿದೆ. ಕೋವಿಡ್ ಲಸಿಕೆ ಹೃದಯಾಘಾತಗಳಿಗೆ ಕಾರಣವಾಗುವ ಬದಲು ದೀರ್ಘ ಕಾಲದಲ್ಲಿ ಹೃದಯದ ರಕ್ಷಣೆ ಮಾಡುತ್ತದೆ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
ತಜ್ಞರ ತಂಡವು ಅಧ್ಯಯನ ನಡೆಸಿದ ರೋಗಿಗಳ ಪೈಕಿ 19 ಜನರಿಗೆ ಈ ಹಿಂದೆ ಕೋವಿಡ್ ಸೋಂಕು ತಗುಲಿತ್ತು. ಹಾಗು ಬಹುತೇಕ ರೋಗಿಗಳು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ, ಹೃದಯಾಘಾತ ಅಥವಾ ಹಠಾತ್ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಾಗಿರಬಹುದೆನ್ನುವ ಸಂಶಯಗಳಿಗೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.