ಕಲಬುರಗಿ : ಹುಲಿಗೆ ವಿಷಪ್ರಾಶನ ಮಾಡಿರುವುದು ವರದಿಗಳಲ್ಲಿ ದೃಢಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಈ ಕುರಿತು ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಅಧಿಕಾರಿಯ ಅಮಾನತಿಗಾಗಿ DPAR (ಡಿಪಿಎಆರ್)ಗೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದ್ದು, ಕ್ರಮದ ಪ್ರಕ್ರಿಯೆ ಮುಂದುವರೆದಿದೆ ಎಂದು ಹೇಳಿದರು.
ಹುಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸಮಿತಿಯನ್ನು ರಚನೆ ಮಾಡಿದ್ದೆ. ಅದರಲ್ಲಿ ಪರಿಸರವಾದಿಗಳಿಗೂ ಅವಕಾಶವನ್ನು ಕೊಡಲಾಗಿತ್ತು. ಮೂರು ದಿನಗಳ ಒಳಗಾಗಿ ನನಗೆ ವರದಿಯನ್ನು ಕೊಡಬೇಕು ಎಂದು ಸೂಚಿಸಿದ್ದೆ. ಖುದ್ದಾಗಿ ನಾನೇ ಆ ಸ್ಥಳಕ್ಕೆ ಭೇಟಿ ಕೊಟ್ಟು ವೀಕ್ಷಣೆ ಮಾಡಿದ್ದೇನೆ. ನಿನ್ನೆ ಬೆಳಗ್ಗೆ ಪ್ರಾಥಮಿಕ ವರದಿ ಬಂದಿದೆ. ಆ ವರದಿಯಲ್ಲಿ ಅಧಿಕಾರಿಗಳ ಕರ್ತವ್ಯಲೋಪ ಸಾಬೀತಾಗಿದೆ. ಅವರನ್ನು ಅಮಾನತು ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಹೊರಗುತ್ತಿಗೆ ಸಿಬ್ಬಂದಿಗೆ ಮೂರು ತಿಂಗಳವರೆಗೆ ಸಂಬಳ ನೀಡದಿರುವುದು ಅಕ್ಷಮ್ಯ. ಅರಣ್ಯ ಇಲಾಖೆ ಸಚಿವನಾದ ಮೇಲೆ ವನ್ಯಜೀವಿ ಧಾಮಕ್ಕೆ ಭೇಟಿ ಕೊಟ್ಟ ಪ್ರತಿ ಸಂದರ್ಭದಲ್ಲಿಯೂ ನಾನು ಎಚ್ಚರಿಕೆಯನ್ನು ಕೊಟ್ಟಿದ್ದೇನೆ. ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಅವರಿಗೆ ಸಂಬಳ ಆಗಬೇಕೆಂಬ ನನ್ನ ಆದೇಶದ ಹೊರತಾಗಿಯೂ ಅವರು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಹಾಗೂ ಈ ಘಟನೆಗಾಗಿ ಶಿಸ್ತುಕ್ರಮ ಜರುಗಿಸಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.