ಬೆಳಗಾವಿ:ಇಲ್ಲಿನ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಕರ್ನಾಟಕದ ಪರ ಗೊತ್ತುವಳಿಯನ್ನು ಅಂಗೀಕರಿಸುವವರೆಗೆ ಹೋರಾಟ ಮುಂದುವರೆಸಲು ಶನಿವಾರ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕನ್ನಡ ಸಂಘಟನೆಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಕರ್ನಾಟಕ ಪರ ಗೊತ್ತುವಳಿಯನ್ನು ಪಾಸು ಮಾಡುವುದಾಗಿ ಕನ್ನಡ ಸಂಘಟನೆಗಳಿಗೆ ನೀಡಿದ ಭರವಸೆಯ ವಿರುದ್ಧ ನಡೆದುಕೊಂಡ ಮಹಾಪೌರರು ಹಾಗೂ ಉಪಮಹಾಪೌರರು ಕನ್ನಡಿಗರ ಕಣ್ಣಿಗೆ ಮಣ್ಣೆರಚುವಂತ ನಿರ್ಣಯವನ್ನು ಕೈಕೊಂಡಿದ್ದಾರೆ. ನಗರಾಭಿವೃದ್ಧಿ ಕಾರ್ಯದರ್ಶಿಗೆ ಪತ್ರ ಬರೆಯುವ ನಿರ್ಣಯ ಕೈಕೊಂಡ ಮೂಲಕ ಕರ್ನಾಟಕದ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ.
ಈಗಾಗಲೇ ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳಿಗೆ ಕರವೇ, ಬೆಂಗಳೂರಿನ ಕನ್ನಡ ನಾಡು, ನುಡಿ ಜಾಗೃತಿ ಸಮಿತಿಯ, ನಾಡಿನ ಹಿರಿಯ ಸಾಹಿತಿಗಳಾದ ಡಾ. ಮರುಳಸಿದ್ಧಪ್ಪ, ಡಾ. ಜಿ. ರಾಮಕೃಷ್ಣ, ಪ್ರೊ. ಎಸ್.ಜಿ.ಸಿದ್ಧರಾಮಯ್ಯ, ಡಾ. ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ, ಆರ್.ಜಿ.ಹಳ್ಳಿ ನಾಗರಾಜ. ಡಾ.ವಸುಂಧರಾ ಭೂಪತಿ ಸೇರಿ ಕನ್ನಡ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪರ ಗೊತ್ತುವಳಿಯನ್ನು ಪಾಸು ಮಾಡುವಲ್ಲಿ ವಿಳಂಬ ತಂತ್ರ ಅನುಸರಿಸಿದಲ್ಲಿ ಮಹಾಪೌರರು ಹಾಗೂ ಉಪಮಹಾಪೌರರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಹಾಗೂ ಗಡಿ ವಿವಾದ ಬಗ್ಗೆ ಖಚಿತವಾದ ನಿಲವು ತಿಳಿಸಲು ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.
ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹಿರೇಕೊಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳುಕರ, ಕ್ರಿಯಾ ಸಮಿತಿಯ ಹಿರಿಯ ಉಪಾಧ್ಯಕ್ಷ ಮೈನೋದ್ದಿನ ಮಕಾನಾದಾರ, ಆನಂದ ಬಿಲಾವರ ಇತರರಿದ್ದರು.
Laxmi News 24×7