ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದು ಆಘಾತಕಾರಿ ದುರಂತ ನಡೆದಿದೆ. ಎಸ್‌ಬಿಐ ಬ್ಯಾಂಕ್ ಉದ್ಯೋಗಿಯೊಬ್ಬರು ಬ್ಯಾಂಕ್ ಎದುರಲ್ಲೇ ತನ್ನ ಪತ್ನಿಯನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಸಹೋದರಿಯನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಎಸ್‌ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದ ಮಾನಸ್ ವಾಜಪೇಯಿ (38) ಎಂಬಾತ ತನ್ನ ಪತ್ನಿಯನ್ನ ಬ್ಯಾಂಕ್ ಹೊರಗೆ ಗುಂಡಿಕ್ಕಿ (Shootout) ಹತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ತೆರಳಿ ಸಹೋದರಿಯನ್ನೂ ಗುಂಡಿಕ್ಕಿ ಕೊಂದು, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಹೊರಗೆ ಗುಂಡಿಕ್ಕಿ ಪತ್ನಿ ಹತ್ಯೆ
ಲಕ್ನೋನ ಪ್ರತಿಷ್ಠಿತ ಗೋಮತಿ ನಗರ ಪ್ರದೇಶದಲ್ಲಿರುವ ಐಸಿಐಸಿಐ ಬ್ಯಾಂಕ್ (ICICI Bank) ಶಾಖೆಯಲ್ಲಿ ಮಾನಸ್ ವಾಜಪೇಯಿಯ ಪತ್ನಿ ದಿವ್ಯಾ ಮಿಶ್ರಾ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನದ ವೇಳೆಗೆ ಮಾನಸ್ ಪತ್ನಿಗೆ ಕರೆ ಮಾಡಿ ಬ್ಯಾಂಕ್‌ನ ಹೊರಗೆ ಬರುವಂತೆ ತಿಳಿಸಿದ್ದಾನೆ ಎನ್ನಲಾಗಿದೆ.
ದಿವ್ಯಾ ಹೊರಗೆ ಬಂದ ಬಳಿಕ ಇಬ್ಬರೂ ಕೆಲ ನಿಮಿಷಗಳ ಕಾಲ ಮಾತನಾಡಿದ್ದಾರೆ. ಬಳಿಕ ಮಾನಸ್ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ದಿವ್ಯಾಳ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾಳನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
1 ವರ್ಷಕ್ಕೂ ಹೆಚ್ಚು ಕಾಲ ಪ್ರತ್ಯೇಕ ವಾಸ
ಮಾನಸ್ ಮತ್ತು ದಿವ್ಯಾ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಕಳೆದ 1 ವರ್ಷಕ್ಕೂ ಹೆಚ್ಚು ಸಮಯದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ಈ ನಡುವೆ, ಪತ್ನಿಯ ಹತ್ಯೆಯ ಬಳಿಕ ಮಾನಸ್ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಕಲಹವೇ ಘಟನೆಗೆ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.
ವಾಟ್ಸಪ್ ಸ್ಟೇಟಸ್‌ನಲ್ಲಿ ಮುಂದಿನ ಕೃತ್ಯದ ಸುಳಿವು
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಮಾನಸ್ ತನ್ನ ಸಹೋದರಿಯನ್ನ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾನೆ. ಈ ಮಾಹಿತಿ ಹೊರಬಂದ ಬಳಿಕ ಪೊಲೀಸರು ಆತನ ಮನೆಗೆ ತೆರಳಿದ್ದಾರೆ. ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮಾನಸ್ ಮತ್ತು ಆತನ ಸಹೋದರಿ ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾನಸ್‌ನ ಎದೆ ಮೇಲೆ ಪಿಸ್ತೂಲ್ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯ ಪರಿಶೀಲನೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದಾರೆ. ಪತ್ನಿಯನ್ನು ಗುಂಡಿಕ್ಕಿದ ಬಳಿಕ ಮಾನಸ್ ಮನೆಗೆ ತೆರಳಿ ಸಹೋದರಿಯನ್ನು ಹತ್ಯೆ ಮಾಡಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುಟುಂಬ ಕಲಹವೇ ಕಾರಣವೇ?
ಪ್ರಾಥಮಿಕ ತನಿಖೆಯ ಪ್ರಕಾರ, ದಾಂಪತ್ಯ ಮತ್ತು ಕುಟುಂಬ ಕಲಹವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರತ್ಯಕ್ಷದರ್ಶಿಗಳು ಹಾಗೂ ಕುಟುಂಬಸ್ಥರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Laxmi News 24×7