ದೆಹಲಿ/ಲಕ್ನೋ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ದುರಂತದಲ್ಲಿ ಮಡಿದ ಪೈಲಟ್‍ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.ಶುಕ್ರವಾರ ರಾತ್ರಿ ನಡೆದ ದುರಂತದಲ್ಲಿ ಪೈಲಟ್ ಅಖಿಲೇಶ್ ಕುಮಾರ್ ಮೃತಪಟ್ಟಿದ್ದರು. ಶನಿವಾರ ರಾತ್ರಿ ಏರ್ ಇಂಡಿಯಾ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ಮೃತದೇಹ ಇಂದು ಬೆಳಗ್ಗೆ ಹುಟ್ಟೂರು ಉತ್ತರ ಪ್ರದೇಶದ ಮಥುರಾಗೆ ತಲುಪಿದೆ.
ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಭಾರತೀಯರನ್ನು ಶುಕ್ರವಾರ ಏರ್ ಇಂಡಿಯಾ ವಿಮಾನ ಮೂಲಕ ಕೇರಳದ ಕೋಯಿಕ್ಕೋಡ್ ನಲ್ಲಿರುವ ಕರಿಪುರ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿ ದುರಂತಕ್ಕೀಡಾಗಿತ್ತು.
ದುಬೈಯಿಂದ 190 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‍ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಪೈಲಟ್ ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸೇರಿ 19 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.