ಡೆಹ್ರಾಡೂನ್: ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು, ಹಾಕದವರಿಗೆ ದಂಡ ವಿಧಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಹಾಗೆ ದಂಡ ಕಟ್ಟಿಯೂ ಇದ್ದೇವೆ. ಆದರೆ ಉತ್ತರಾಖಂಡ್ ನಲ್ಲಿ ಹೆಲ್ಮೆಟ್ ಹಾಕದ ಯುವಕನೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು. ಉತ್ತರಾಖಂಡ್‍ನ ಉಧಮ್ ಸಿಂಗ್ ಜಿಲ್ಲೆಯ ರುದ್ರಾಪುರದಲ್ಲಿ ಪೊಲೀಸರು ಯುವಕನ ಹಣೆಗೆ ಕೀಯಿಂದ ತಿವಿದಿದ್ದಾರೆ. ಪರಿಣಾಮ ಯುವಕನ ಹಣೆಗೆ ಗಂಭೀರ ಗಾಯಗಳಾಗಿದ್ದು, ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ರುದ್ರಾಪುರ ಪ್ರದೇಶದಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ರಾಫಿಕ್ ನಿಯಮ ಪಾಲಿಸದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಯುವಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ತಾರಕ್ಕೇರುತ್ತಿದ್ದಂತೆಯೇ ಮತ್ತೊಬ್ಬ ಪೊಲೀಸ್ ಯುವಕನ ಕೈಯಿಂದ ಬೈಕ್ ಕೀ ಎಳೆದುಕೊಂಡು ಆತನ ಹಣೆಗೆ ಜೋರಾಗಿ ತಿವಿದಿದ್ದಾನೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವಕನಿಗೆ ತಿವಿದ ಪರಿಣಾಮ ಹಣೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡು ರುದ್ರಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಕಲ್ಲುತೂರಾಟ ಕೂಡ ನಡೆಸಿದ್ದಾರೆ.
ಪರಿಸ್ಥಿತಿ ಬಿಗಾಡಾಯಿಸುತ್ತಿದ್ದಂತೆಯೇ ರುದ್ರಾಪುರ ಕ್ಷೇತ್ರದ ಶಾಸಕ ರಾಜ್‍ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಕೆಲಸದಿಂದ ವಜಾ ಮಾಡುವಂತೆ ಸೂಚಿಸಿದ್ದು, ಸದ್ಯ ಮೂವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.