ಬೆಂಗಳೂರು: ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಕೊರೊನಾನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಹಬ್ಬ ಮನೆಯಲ್ಲೇ ಮಾಡಿ. ಕೊರೊನಾ ವಿರುದ್ಧ ಹೋರಾಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಗಣಪತಿ ಕೂರಿಸಲು ಅವಕಾಶವೇ ಇಲ್ಲ. ಈ ಮೂಲಕ ಹಬ್ಬಗಳನ್ನ ಮನೆಯಲ್ಲಿ ಮಾಡಬೇಕು ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಹಬ್ಬದ ಶಾಪಿಂಗ್ ನೆಪದಲ್ಲಿ ನಿಯಮಗಳನ್ನು ಮೀರಿದರೆ ದಂಡ ವಿಧಿಸಲಾಗುತ್ತಿದೆ. ಎಲ್ಲ ವಿಚಾರಕ್ಕೂ ಮಾರ್ಗಸೂಚಿ ಮಾಡಲು ಆಗಲ್ಲ. ಆದರೆ ಕೊರೊನಾ ವಿಚಾರವಾಗಿ ನಿಯಮ ಮೀರಿದರೆ ದಂಡ ಪಕ್ಕಾ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತರೆ ಜೇಬಿಗೆ ಕತ್ತರಿ ಬೀಳುತ್ತದೆ. ಹಬ್ಬದ ಹಿಂದಿನ ದಿನ ಪೊಲೀಸ್ ಹಾಗೂ ಬಿಬಿಎಂಪಿ ದಂಡ ಹಾಕಲಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಮಹಾಮಾರಿ ಕೊರೊನಾ ವೈರಸ್‍ನಿಂದ ಈ ವರ್ಷ ರಸ್ತೆಯಲ್ಲಿ ಗಣೇಶ ಕೂರಿಸಿ ಅದ್ಧೂರಿಯಾಗಿ ಹಬ್ಬ ಮಾಡಲು ಅವಕಾಶ ಇಲ್ಲದಂತಾಗಿದೆ. ಈ ಮೂಲಕ ಬೆಂಗಳೂರಿನ ರೋಡ್, ರೋಡಿನಲ್ಲಿ ಗಣೇಶ್ ಕೂರಿಸುತ್ತಿದ್ದವರಿಗೆ ಬೇಸರವಾಗಿದೆ. ಆದರೆ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಬಿಬಿಎಂಪಿ ಮುಂಜಾಗ್ರತೆಯಾಗಿ ಈ ಕ್ರಮವನ್ನು ಕೈಗೊಂಡಿದೆ.