Breaking News

ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು: ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಇಂದಿಗೆ 2,792 ದಿನಗಳಾಗುತ್ತಿದ್ದು, ಈ ಮೂಲಕ ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ನಾಳೆ ಅರಸು ಅವರ ದಾಖಲೆಯನ್ನೂ ಮುರಿದು, ರಾಜ್ಯದಲ್ಲಿ ಸುದೀರ್ಘ ಅವಧಿಗೆ ಸಿಎಂ ಆದ ಹೊಸ ದಾಖಲೆಯನ್ನು ಅವರು ನಿರ್ಮಿಸಲಿದ್ದಾರೆ. ದೇವರಾಜ ಅರಸು 2,792 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿದ್ದದ್ದು ಈವರೆಗಿನ ದಾಖಲೆಯಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸೋಮವಾರ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ ಎಂದು ತಿಳಿಸಿದ್ದಾರೆ. ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆ ಇರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 9 ಬಾರಿ ಗೆಲುವು ಸಾಧಿಸಿದ್ದೇನೆ. ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಅವಿರೋಧವಾಗಿಯೂ ಆಯ್ಕೆಯಾಗಿದ್ದರು ಎಂದು ಬರೆದುಕೊಂಡಿದ್ದಾರೆ.

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಮುಂದೆ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು ಎಂದು ತಿಳಿಸಿದ್ದಾರೆ.

ಸಚಿನ್ ದಾಖಲೆ ಮುರಿದ ಕೊಹ್ಲಿಯ ಉದಾಹರಣೆ ಕೊಟ್ಟ ಸಿದ್ದರಾಮಯ್ಯ: ಇದೇ ವೇಳೆ, ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲಿಲ್ಲವೇ?. ಹಾಗಾಗಿ, ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ನಾನು ಹೇಳುವುದಿಲ್ಲ. ಅತಿ ಹೆಚ್ಚು ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ ಅಥವಾ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ನನ್ನ ದಾಖಲೆಯನ್ನು ಮುರಿಯಲು ಮುಂದೆ ಯಾರಾದರೂ ಬರಬಹುದು ಎಂದರು.

ಸಿಎಂ ಸಿದ್ದರಾಮಯ್ಯ

ಬಜೆಟ್ ಸಿದ್ಧತೆಗಳ ಕುರಿತು ಮಾತನಾಡಿದ ಅವರು, ಮಕರ ಸಂಕ್ರಾಂತಿಯ ನಂತರ ಬಜೆಟ್‌ಗೆ ಸಿದ್ಧತೆ ಆರಂಭವಾಗಲಿದೆ ಎಂದು ತಿಳಿಸಿದರು. ಸಿದ್ದರಾಮಯ್ಯ ಇದುವರೆಗೆ 16 ಬಜೆಟ್ ಮಂಡಿಸಿದ್ದಾರೆ.

ಸಾಧನಾ ಸಮಾವೇಶದ ಕುರಿತ ಪ್ರಶ್ನೆಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡರು ಏನೋ ಯೋಜಿಸುತ್ತಿದ್ದಾರೆ. ನನ್ನ ಬಳಿ ಯಾವುದೇ ವಿವರಗಳಿಲ್ಲ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಅದು ಆಗಲೇಬೇಕು. ರಾಹುಲ್ ಗಾಂಧಿ ಅವರು ನನಗೆ ಕರೆ ಮಾಡಿದಾಗಲೆಲ್ಲ ನಾನು ಅವರೊಂದಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಆ ಕುರಿತಾಗಿ ಜನವರಿಯಲ್ಲಿ ಮತ್ತೆ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ಬಳ್ಳಾರಿ ಘರ್ಷಣೆಯನ್ನು ಉಲ್ಲೇಖಿಸಿ, ಮಂಗಳವಾರ ಗೃಹ ಸಚಿವ ಪರಮೇಶ್ವರ್ ಜತೆ ಚರ್ಚಿಸುವುದಾಗಿ ತಿಳಿಸಿದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ