Breaking News

ಸಚಿವ ಬೈರತಿ ಸುರೇಶ್​ PA ಸೋಗಿನಲ್ಲಿ ದಾವಣಗೆರೆ DCಗೇ ವಂಚನೆ: ಆರೋಪಿ ಸೆರೆ

Spread the love

ದಾವಣಗೆರೆ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಜಿಲ್ಲಾಧಿಕಾರಿಗೆ ವಂಚಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂರ್ತಿ ಅಲಿಯಾಸ್ ಅಭಿಷೇಕ್ ದೊಡ್ಡಮನಿ (20) ಬಂಧಿತ ಆರೋಪಿ. ತಾನು ಸಚಿವ ಬೈರತಿ ಸುರೇಶ್ ಆಪ್ತ ಸಹಾಯಕ ಎಂದು ಡಿಸಿಗೆ ಕರೆ ಮಾಡಿದ್ದ ಅಭಿಷೇಕ್ ದೊಡ್ಡಮನಿ, ಸರ್ಕಾರಿ ಸೌಲಭ್ಯ ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಬಂಧಿಸಲಾಗಿದೆ.‌ ಬಂಧಿತ ಆರೋಪಿ ಕಾರವಾರದವನಾಗಿದ್ದು, ದಾವಣಗೆರೆಗೆ ಆಗಮಿಸಿ ಈ ಕೃತ್ಯ ಎಸಗಿದ್ದ.

ಆಗಿದ್ದೇನು? ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ್ ಸ್ವಾಮಿ ಅವರಿಗೆ ಕರೆ ಮಾಡಿದ್ದ ಅಭಿಷೇಕ್ ದೊಡ್ಡಮನಿ, ನಾನು ಬೈರತಿ ಸುರೇಶ್ ಅವರ ಆಪ್ತ ಸಹಾಯಕನಾಗಿದ್ದು ಬೆಳಗಾವಿಗೆ ತೆರಳಬೇಕಾಗಿದೆ, ತನಗೆ ಒಂದು ಕಾರಿನ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದ್ದಾನೆ. ಆದರೆ ಜಿಲ್ಲಾಧಿಕಾರಿ ಹಿಂದೆ ಮುಂದೆ ಯೋಚಿಸದೆ ಆರೋಪಿ ಅಭಿಷೇಕ್ ದೊಡ್ಡಮನಿಗೆ ಸರ್ಕಾರಿ ಕಾರು, ಅದಕ್ಕೆ ಇಂಧನ ತುಂಬಿಸಿ ಕಾರು ಚಾಲಕನನ್ನು ಕಳುಹಿಸಿಕೊಟ್ಟಿದ್ದರು. ಆರೋಪಿ ದಾವಣಗೆರೆಯಿಂದ ಬೆಳಗಾವಿ ಸೇರಿದಂತೆ ಇನ್ನಿತರ ಭಾಗದಲ್ಲಿ ಪ್ರಯಾಣಿಸಿ ದಾವಣಗೆರೆಗೆ ವಾಪಸಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಸ್ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಿದಾಗ ಅನುಮಾನ: ತನಗೆ ಬೇಕಾದ ಕಡೆ ಸರ್ಕಾರಿ ಕಾರಿನಲ್ಲಿ ಪ್ರಯಾಣಿಸಿ ಮರಳಿ ದಾವಣಗೆರೆಗೆ ಆಗಮಿಸಿದ್ದ ಆರೋಪಿ, ಕೆಎಸ್ಆರ್​​ಟಿಸಿ ಬಸ್ ಹತ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಜಿಲ್ಲಾಧಿಕಾರಿ ಕರೆ ಮಾಡಿ ವಿಚಾರಿಸಿದಾಗ ಕಾರು ಚಾಲಕ ಅಭಿಷೇಕ್​ ಕೆಎಸ್ಆರ್​ಟಿಸಿ ಬಸ್​ನಲ್ಲಿ ತೆರಳಿದರು ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ಕಾರಿನಲ್ಲೇ ತೆರಳಬಹುದಿತ್ತು, ಕೆಎಸ್ಆರ್​ಟಿಸಿ ಬಸ್​ನಲ್ಲಿ ಹೋಗಿದ್ದು ಏಕೆ ಎಂಬ ಅನುಮಾನ ಜಿಲ್ಲಾಧಿಕಾರಿಗೆ ಮೂಡಿದೆ. ತಕ್ಷಣ ಜಿಲ್ಲಾಧಿಕಾರಿ ಪೊಲೀಸರಿಗೆ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿ ಪಿಎ ದೂರು, ಆರೋಪಿ ಬಂಧನ: ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಗುನ್ನೆ ನಂ.86/25 ರಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸರ್ಕಾರಿ ಅಧಿಕಾರಿ ಮತ್ತು ಆಪ್ತ ಸಹಾಯಕನ ಸೋಗಿನಲ್ಲಿ ಜಿಲ್ಲಾಧಿಕಾರಿಗೆ ವಂಚಿಸಿದ್ದ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ